ಗೋಕಾಕ: ಅನೈತಿಕ ಸಂಬಂಧಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯನ್ನು ಕೊಲೆ ಮಾಡಿ, ನಂತರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ನಾಟಕವಾಡಿದ ಪತಿಯನ್ನು ಗೋಕಾಕ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಸಂತೋಷ ರೇವಣ್ಣ ಪಟಾಯತ (33), ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ನಿವಾಸಿಯಾಗಿದ್ದು, ತನ್ನ ಪತ್ನಿ ಸಕ್ಕುಬಾಯಿ ಸಂತೋಷ ಪಟಾಯತ (32) ಅವರನ್ನು ಕೊಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ.

ಸಕ್ಕುಬಾಯಿ ಅವರ ತಾಯಿ ಉಡಚವ್ವ ಮುಂಡಲೀಕ ಘೋಡಗೇರ ಅವರು ಜೂನ್ 12ರಂದು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತಮ್ಮ ಅಳಿಯ ಸಂತೋಷ ಪಟಾಯತ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಷಯ ತಿಳಿದಿದ್ದ ಪತ್ನಿಯನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ದೂರಿನ ಆಧಾರದ ಮೇಲೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಸಿಪಿಐ ಸುರೇಶಬಾಬು ಆರ್.ಬಿ. ಹಾಗೂ ಪಿಎಸ್‌ಐ ಕೆ.ಐ. ವಾಲಿಕಾರ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು.

ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಕಳೆದ ನಾಲ್ಕು ವರ್ಷಗಳಿಂದ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಸಂತೋಷ ಪಟಾಯತ, ಈ ವಿಚಾರ ಪತ್ನಿಗೆ ತಿಳಿದ ಬಳಿಕ ನಿರಂತರ ಜಗಳ ಮಾಡುತ್ತಿದ್ದನು. ಪತ್ನಿ ಈ ವಿಷಯವನ್ನು ತನ್ನ ಕುಟುಂಬದವರಿಗೆ ತಿಳಿಸುವುದಾಗಿ ಹೇಳಿದ್ದರಿಂದ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಜೂನ್ 11ರಂದು ಪತ್ನಿಯನ್ನು ಮರಕುಂಬಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದುಕೊಂಡು ಹೋದ ಆರೋಪಿ, ಹಿಂದಿರುಗುವ ವೇಳೆ ಶಿಲ್ತಿಭಾವಿ ಹದ್ದಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ತಂಪು ಪಾನೀಯದಲ್ಲಿ ವಿಷಕಾರಿ ಪದಾರ್ಥ ಬೆರೆಸಿ “ದೇವರ ಪ್ರಸಾದ” ಎಂದು ಹೇಳಿ ಪತ್ನಿಗೆ ಕುಡಿಸಿದ್ದಾನೆ. ಬಳಿಕ ಆಕೆಗೆ ವಾಂತಿ ಆರಂಭವಾದಾಗ ನಿರ್ಜನ ಪ್ರದೇಶದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆ ಬಳಿಕ ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಮೃತದೇಹದ ಮೇಲೆ ಮೋಟಾರ್ ಸೈಕಲ್ ಬೀಳಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಅಲ್ಲದೆ ತಾನೂ ಅಪಘಾತದಲ್ಲಿ ಗಾಯಗೊಂಡವನಂತೆ ನಟಿಸಿ ರಾತ್ರಿ ತಡವಾಗಿ ತುರ್ತು ಸೇವೆ 112ಕ್ಕೆ ಕರೆ ಮಾಡಿ ಸಹಾಯ ಕೋರಿದ್ದಾನೆ. ನಂತರ ಮೃತಳ ಕುಟುಂಬದವರಿಗೂ ರಸ್ತೆ ಅಪಘಾತದಲ್ಲಿ ಸಾವು ಸಂಭವಿಸಿದೆ ಎಂದು ನಂಬಿಸಲು ಪ್ರಯತ್ನಿಸಿದ್ದಾನೆ.

ಆದರೆ ಪೊಲೀಸರ ಸೂಕ್ಷ್ಮ ತನಿಖೆಯಿಂದ ಪ್ರಕರಣದ ನಿಜಸ್ವರೂಪ ಬಹಿರಂಗಗೊಂಡಿದ್ದು, ಅಪಘಾತದ ಕಥೆಯ ಹಿಂದೆ ಅಡಗಿದ್ದ ಕೊಲೆ ಸಂಚು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸುರೇಶಬಾಬು ಆರ್.ಬಿ., ಪಿಎಸ್‌ಐ ಕೆ.ಐ. ವಾಲಿಕಾರ ಹಾಗೂ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Related News

error: Content is protected !!