ಸೋಶಿಯಲ್ ಮೀಡಿಯಾದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಸೋನು ಶ್ರೀನಿವಾಸ್ ಗೌಡ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟ್ರೋಲ್ಸ್ಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದ ಸೋನು, ಇದೀಗ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಕಿಯಾ ಸೆಲ್ಟೋಸ್ ಕಾರು ಖರೀದಿಸಿದ್ದು, ತಮ್ಮ ಐದು ವರ್ಷದ ಕನಸು ನನಸಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಹೊಸ ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಅವರಿಗೆ ಅಭಿನಂದನೆಗಳ ಜೊತೆಗೆ ಅಸಭ್ಯ ಹಾಗೂ ಅಶ್ಲೀಲ ಕಾಮೆಂಟ್ಗಳ ಸುರಿಮಳೆಯೂ ಎದುರಾಯಿತು. ಈ ಬೆಳವಣಿಗೆಯಿಂದ ಬೇಸರಗೊಂಡ ಸೋನು, ತಮ್ಮ ಯೂಟ್ಯೂಬ್ ವ್ಲಾಗ್ನಲ್ಲಿ ಕಾಮೆಂಟ್ ಮಾಡಿದವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
“ಒಬ್ಬ ಹುಡುಗಿ ಮನೆ, ಕಾರು ಅಥವಾ ಚಿನ್ನ ಖರೀದಿಸಿದರೆ ಅದು ಕೆಟ್ಟ ದಾರಿಯಲ್ಲಿ ಸಂಪಾದಿಸಿದ ಹಣ ಎಂಬ ಮನೋಭಾವ ಕೆಲವರಲ್ಲಿದೆ. ಆದರೆ ಅದೇ ಸಾಧನೆಯನ್ನು ಒಬ್ಬ ಹುಡುಗ ಮಾಡಿದರೆ ಮಾತ್ರ ಎಲ್ಲರೂ ಒಳ್ಳೆಯ ರೀತಿಯಲ್ಲಿ ದುಡಿದು ಸಂಪಾದಿಸಿದ್ದಾನೆ ಎಂದು ನಂಬುತ್ತಾರೆ. ನಮ್ಮ ಸಮಾಜದಲ್ಲಿರುವ ಈ ದ್ವಂದ್ವ ಮನಸ್ಥಿತಿಯೇ ವಿಷಾದಕರ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕಾರು ಖರೀದಿಯ ಬಗ್ಗೆ ಸ್ಪಷ್ಟನೆ ನೀಡಿದ ಸೋನು, “ನಾನು ಕೆಟ್ಟ ದಾರಿಯಲ್ಲಿ ಹಣ ಸಂಪಾದಿಸಿದ್ದರೆ ಒಂದು ಕಾರು ಖರೀದಿಸಲು ಇಷ್ಟು ವರ್ಷ ಕಾಯಬೇಕಾಗುತ್ತಿರಲಿಲ್ಲ. ಈ ಕಾರನ್ನು ನಾನು ಸಾಲದ ಮೂಲಕ ಖರೀದಿಸಿದ್ದೇನೆ. ಐದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಿ, ಉಳಿದ ಹಣವನ್ನು ಲೋನ್ನಲ್ಲಿ ಪಡೆದುಕೊಂಡಿದ್ದೇನೆ,” ಎಂದು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿಡಿಯೋಗಳನ್ನು ಮಾಡುತ್ತಿದ್ದು, ಹಲವು ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದೇನೆ. ಜೊತೆಗೆ ಒಂದು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದೇನೆ ಎಂದು ಸೋನು ವಿವರಿಸಿದರು.
ಅಶ್ಲೀಲ ಕಾಮೆಂಟ್ ಮಾಡುವವರ ವಿರುದ್ಧ ಕಿಡಿಕಾರಿದ ಅವರು, “ನನ್ನ ಸಾಧನೆಯನ್ನು ನೋಡಿ ಕೆಲವರಿಗೆ ಹೊಟ್ಟೆ ಉರಿಯುತ್ತಿದೆ. ಆದರೆ ನಾನು ನನ್ನ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಉರಿದುಕೊಂಡೇ ಇರಲಿ,” ಎಂದು ಖಡಕ್ ತಿರುಗೇಟು ನೀಡಿದ್ದಾರೆ.
