ಆನೇಕಲ್ನಲ್ಲಿ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿ ನಡೆದ ಲಾರಿ ದರೋಡೆ ಪ್ರಕರಣವನ್ನು ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಬಂಧಿತ ಆರೋಪಿಗಳನ್ನು ಶರತ್ ಕುಮಾರ್ (23), ರೂಪೇಶ್ (26) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗುರುತಿಸಲಾಗಿದೆ. ಶರತ್ ಕುಮಾರ್ ಸರ್ಜಾಪುರದ ಸೋಂಪುರ ನಿವಾಸಿಯಾಗಿದ್ದು, ರೂಪೇಶ್ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದವನಾಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮದ್ಯ ಸೇವಿಸಿದ ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದರೋಡೆಗೆ ಸಂಚು ರೂಪಿಸಿದ್ದರು. ಚಂದಾಪುರ–ಆನೇಕಲ್ ಮುಖ್ಯರಸ್ತೆಯ ಮರಸೂರು ಸಮೀಪ ರಾತ್ರಿ ವೇಳೆ ಸಂಚರಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಅವರು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಭಯಗೊಂಡ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾನೆ. ಬಳಿಕ ಆರೋಪಿಗಳು ಲಾರಿಯನ್ನು ಕೊಂಡೊಯ್ದಿದ್ದು, ಅದನ್ನು ಬಳಸಿಕೊಂಡು ಹಣ ವಸೂಲಿ ಮಾಡುವ ಯೋಜನೆಯೂ ಹೊಂದಿದ್ದರು ಎನ್ನಲಾಗಿದೆ. ಲಾರಿಯಲ್ಲಿ ಜಿಪಿಆರ್ಎಸ್ ಅಳವಡಿಸಲಾಗಿರುವುದರಿಂದ ಮಾಲೀಕರು ವಾಹನದ ಸ್ಥಳ ಪತ್ತೆಹಚ್ಚಿ ಬರುತ್ತಾರೆ ಎಂಬುದು ಆರೋಪಿಗಳಿಗೆ ತಿಳಿದಿತ್ತು. ನಂತರ ಲಾರಿಯನ್ನು ಹಿಂತಿರುಗಿಸಲು ಹಣ ಕೇಳುವ ಪ್ಲಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಚಾಲಕ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ಪೆಕ್ಟರ್ ಚಂದ್ರಪ್ಪ ನೇತೃತ್ವದ ತಂಡ ತಕ್ಷಣ ತನಿಖೆ ಆರಂಭಿಸಿತು.
ತನಿಖೆ ವೇಳೆ ಲಾರಿ ಸರ್ಜಾಪುರದ ಸೋಂಪುರ ಪ್ರದೇಶದಲ್ಲಿರುವ ಮಾಹಿತಿ ಲಭಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಪರಿಶೀಲನೆ ವೇಳೆ ಪ್ರಮುಖ ಆರೋಪಿ ಶರತ್ ಕುಮಾರ್ ಈ ಹಿಂದೆಯೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಹಿತಿ ಹೊರಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೂರ್ಯನಗರ ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
