ಕಾರವಾರ: ಹಳಿಯಾಳದಲ್ಲಿ ಮಾಜಿ ರೌಡಿ ಶೀಟರ್‌ನಿಂದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದ ಆರೋಪದ ಹಿನ್ನೆಲೆ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ಮಬನೂರು ಅವರನ್ನು ಅಮಾನತು ಮಾಡಲಾಗಿದ್ದು, ಠಾಣೆಯ 8 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಅವರ ಆದೇಶದಂತೆ ಈ ಕ್ರಮ ಜಾರಿಗೊಂಡಿದೆ.
ಜೂನ್ 14ರ ರಾತ್ರಿ ಹಳಿಯಾಳ ಪಟ್ಟಣದ ಮೌರ್ಯ ಬಾರ್ ಮತ್ತು ರೆಸ್ಟೋರೆಂಟ್ ಎದುರು ಮಾಜಿ ರೌಡಿ ಶೀಟರ್ ಮಂಜುನಾಥ ಸುಬ್ರಾಯ ಬೇಕನಿ ಅಲಿಯಾಸ್ ‘ಮಚ್ಚ್ ಮಂಜಾ’ ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ತೆರಳಿದ ಪೊಲೀಸರೊಂದಿಗೆ ಆರೋಪಿ ವಾಗ್ವಾದ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಈ ಘಟನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಘಟನೆಯ ವೇಳೆ ಸ್ಥಳದಲ್ಲಿದ್ದ ಪಿಎಸ್‌ಐ ಬಸವರಾಜ ಮಬನೂರು ಅವರು ತಮ್ಮ ಸಿಬ್ಬಂದಿಯ ನೆರವಿಗೆ ಸಮರ್ಪಕವಾಗಿ ಧಾವಿಸಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಯುತ್ತಿದ್ದರೂ ಸೂಕ್ತ ಮಧ್ಯಪ್ರವೇಶ ಮಾಡದಿರುವುದು ಇಲಾಖೆಯೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಂತರಿಕ ತನಿಖೆ ನಡೆಸಿ, ಪಿಎಸ್‌ಐ ಅಮಾನತು ಹಾಗೂ 8 ಸಿಬ್ಬಂದಿಯ ವರ್ಗಾವಣೆಗೆ ಆದೇಶಿಸಿದೆ. ಸದ್ಯ ಪೊಲೀಸರ ಮೇಲಿನ ದಾಳಿ ಮತ್ತು ಕರ್ತವ್ಯ ಲೋಪ ಎರಡೂ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
