ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಗಂಭೀರ ಆರೋಪವೊಂದು ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಮದನ್ ರಾಜ್ ವಿರುದ್ಧ “ಪ್ರೀತಿ ಹೆಸರಿನಲ್ಲಿ ವಂಚನೆ” ಪ್ರಕರಣ ದಾಖಲಾಗಿದೆ.

ಯುವತಿಯೊಬ್ಬಳು ನೀಡಿರುವ ದೂರಿನ ಪ್ರಕಾರ, ಮದನ್ ರಾಜ್ ಹಲವು ವರ್ಷಗಳಿಂದ ತನ್ನೊಂದಿಗೆ ಪ್ರೀತಿಯ ಸಂಬಂಧದಲ್ಲಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಇತ್ತೀಚೆಗೆ ಆತ ಇನ್ನೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಬಹಿರಂಗವಾಗಿದ್ದು, ಇದರಿಂದ ತನ್ನನ್ನು ವಂಚಿಸಲಾಗಿದೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. “ಮನೆಯಲ್ಲಿ ನಮ್ಮ ಮದುವೆಗೆ ಒಪ್ಪುತ್ತಿಲ್ಲ” ಎಂದು ಹೇಳಿ, ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಯತ್ನಿಸೋಣ ಎಂದು ಪ್ರೇರೇಪಿಸಿದ್ದಾನೆ ಎಂಬುದು ಯುವತಿಯ ಹೇಳಿಕೆ. ಆ ನೆಪದಲ್ಲಿ ಆಕೆಗೆ ವಿಷಕಾರಿ ಪದಾರ್ಥ ಕುಡಿಸಿ, ಆತ ತಪ್ಪಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯುವತಿ ಮಾಡಿರುವ ಆರೋಪಗಳು ಸತ್ಯವೋ ಸುಳ್ಳೋ ಎಂಬುದು ಸಂಪೂರ್ಣ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

ಈ ಪ್ರಕರಣ ಇದೀಗ ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

Related News

error: Content is protected !!