ತಿಪಟೂರು ಘಟಕದ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಯ ಪ್ರಾಮಾಣಿಕ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ತಿಪಟೂರು ಘಟಕದ ವಾಹನ ಸಂಖ್ಯೆ 876 ಚನ್ನರಾಯಪಟ್ಟಣದಿಂದ ತಿಪಟೂರಿಗೆ ಮಧ್ಯಾಹ್ನ 1.15ಕ್ಕೆ ಪ್ರಯಾಣಿಸುತ್ತಿದ್ದ ವೇಳೆ, ರೂಪೇಶ್ ಎಂಬ ಪ್ರಯಾಣಿಕರು ಜಂಬೂರು ಬಳಿ ಇಳಿಯಲು ಬಸ್ಸಿಗೆ ಏರಿದ್ದರು.
ರೂಪೇಶ್ ಅವರು ತಮ್ಮ ವೈಯಕ್ತಿಕ ಸಮಸ್ಯೆಗಳಿಗಾಗಿ ಮುತ್ತೂಟ್ ಫೈನಾನ್ಸ್‌ನಲ್ಲಿ ಬಂಗಾರದ ಆಭರಣಗಳನ್ನು ಅಡವಿಟ್ಟು ₹85,000 ಹಣ ಪಡೆದು, ಅದನ್ನು ಪರ್ಸ್‌ನಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದರು. ಆದರೆ, ಜಂಬೂರುದಲ್ಲಿ ಇಳಿಯುವಾಗ ತಮ್ಮ ಪರ್ಸ್ ಅನ್ನು ಬಸ್ಸಿನಲ್ಲೇ ಮರೆತು ಇಳಿದಿದ್ದರು.
ಬಸ್ ನುಗ್ಗೆಹಳ್ಳಿಗೆ ತಲುಪಿದ ಬಳಿಕ, ವಾರಸುದಾರರಿಲ್ಲದ ಸಂದರ್ಭದಲ್ಲಿ ನಿರ್ವಾಹಕರು ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ₹85,000 ನಗದು ಹಾಗೂ ಪ್ರಮುಖ ದಾಖಲೆಗಳು ಇರುವುದನ್ನು ಗಮನಿಸಿದರು. ತಕ್ಷಣವೇ ಪರ್ಸ್‌ನಲ್ಲಿದ್ದ ಮಾಹಿತಿಯನ್ನು ಬಳಸಿ ರೂಪೇಶ್ ಅವರ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದರು. ಇದರಿಂದ ಹಣ ಕಳೆದುಕೊಂಡಿದ್ದ ರೂಪೇಶ್ ಆತಂಕದಿಂದ ಹೊರಬಂದು ನೆಮ್ಮದಿ ಪಡೆದರು.
ನಂತರ ರೂಪೇಶ್ ಅವರನ್ನು ತಿಪಟೂರು ಬಸ್ ನಿಲ್ದಾಣಕ್ಕೆ ಕರೆಸಿ, ನಿರ್ವಾಹಕ ದಯಾನಂದ್ ಹಾಗೂ ಚಾಲಕ ಜಗದೀಶ್ ಅವರು ಸಂಚಾರಿ ನಿಯಂತ್ರಕರ ಸಮ್ಮುಖದಲ್ಲಿ ಹಣ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು.
ಈ ಘಟನೆಗೆ ಪ್ರತಿಕ್ರಿಯೆ ನೀಡಿದ ರೂಪೇಶ್, “ನನ್ನ ಕಷ್ಟಕಾಲದಲ್ಲಿ ಹಣವನ್ನು ಹಿಂತಿರುಗಿಸಿದ ಚಾಲಕ ಮತ್ತು ನಿರ್ವಾಹಕರು ನನಗೆ ದೇವರ ಸಮಾನರು” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಪ್ರಾಮಾಣಿಕತೆಯನ್ನು ಮೆರೆದ ದಯಾನಂದ್ ಮತ್ತು ಜಗದೀಶ್ ಅವರ ಈ ನಡೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
