ಹೈದರಾಬಾದ್: ಪತ್ನಿಯ ಮೇಲೆ ತನ್ನ ಮೂವರು ಸ್ನೇಹಿತರಿಂದ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿಸಿರುವ ಆರೋಪ ಪತಿಯ ವಿರುದ್ಧ ಕೇಳಿಬಂದಿದ್ದು, ಹೈದರಾಬಾದ್‌ನಲ್ಲಿ ನಡೆದಿರುವ ಈ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆ ಬಾಡಿಗೆ ಬಾಕಿ ಉಳಿದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಬೀಗ ಒಡೆದು ತೆರೆದಾಗ, ಸಂತ್ರಸ್ತ ಮಹಿಳೆ ಹೊರಬರಲು ಸಾಧ್ಯವಾಗಿ ಪ್ರಕರಣ ಬಹಿರಂಗವಾಗಿದೆ.

ಮ್ಯಾನ್ಮಾರ್ ಮೂಲದ 18 ವರ್ಷದ ಹುಮೈರಾ ತಮನ್ನಾ ಎಂಬ ಯುವತಿ ನೀಡಿದ ದೂರಿನ ಪ್ರಕಾರ, ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ನಲ್ಲಿ ವಾಸಿಸುತ್ತಿದ್ದಾಗ ಮೊಹಮ್ಮದ್ ಫಯಾಜ್ ಎಂಬಾತನ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿದ್ದ ಫಯಾಜ್, ಕುಟುಂಬದವರಿಗೆ ತಿಳಿಸದೆ ಮೇ ತಿಂಗಳಲ್ಲಿ ಆಕೆಯನ್ನು ಭಾರತಕ್ಕೆ ಕರೆತಂದಿದ್ದ ಎನ್ನಲಾಗಿದೆ. ಭಾರತಕ್ಕೆ ಬಂದ ಮೂರ್ನಾಲ್ಕು ದಿನಗಳಲ್ಲೇ ಇಬ್ಬರೂ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು.

ಮದುವೆಯಾದ ಸುಮಾರು ಒಂದು ತಿಂಗಳ ಬಳಿಕ ಫಯಾಜ್ ತನ್ನ ಮೂವರು ಸ್ನೇಹಿತರಾದ ಅಹ್ಮದ್ ಮುಜೀಬ್, ನೂರ್ ಕಮಾಲ್ ಮತ್ತು ಜಿಯಾ-ಉರ್-ರೆಹಮಾನ್ ಅವರನ್ನು ಮನೆಗೆ ಕರೆತರುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಬಳಿಕ ಮನೆಯಿಂದ ಹೊರಹೋಗುವಾಗ ಬೀಗ ಹಾಕಿ, ತನ್ನ ಸ್ನೇಹಿತರನ್ನು ಒಳಗೆ ಕಳುಹಿಸುತ್ತಿದ್ದನು. ಈ ವೇಳೆ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕೃತ್ಯಗಳ ಕುರಿತು ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಆರೋಪಿಗಳಲ್ಲಿ ಇಬ್ಬರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಭಯ ಮತ್ತು ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂಬ ಅರಿವಿಲ್ಲದ ಕಾರಣ ಮಹಿಳೆ ಇಷ್ಟು ದಿನ ಮೌನವಾಗಿದ್ದರು ಎಂದು ತಿಳಿದುಬಂದಿದೆ.

ಬೀಗ ಒಡೆದಾಗ ಬಯಲಾದ ಪ್ರಕರಣ

ಅಕ್ಟೋಬರ್ 23ರಂದು ಬಾಕಿ ಉಳಿದಿದ್ದ ಬಾಡಿಗೆ ಹಣ ಪಡೆಯಲು ಮನೆ ಮಾಲೀಕರು ಬಂದಿದ್ದರು. ಈ ವೇಳೆ ಮನೆಗೆ ಹೊರಗಿನಿಂದ ಬೀಗ ಹಾಕಿರುವುದನ್ನು ಗಮನಿಸಿ, ಅದನ್ನು ಒಡೆದು ತೆರೆದಿದ್ದಾರೆ. ಇದರಿಂದ ಮಹಿಳೆಗೆ ಮನೆಯಿಂದ ಹೊರಬರಲು ಸಾಧ್ಯವಾಗಿದೆ.

ನಂತರ ಮತ್ತೊಬ್ಬ ವ್ಯಕ್ತಿಯ ಮೊಬೈಲ್ ಫೋನ್ ಮೂಲಕ ಕುಟುಂಬದವರನ್ನು ಸಂಪರ್ಕಿಸಿದ ಮಹಿಳೆಯನ್ನು ಸಂಬಂಧಿಕರ ಮನೆಗೆ ಕರೆದೊಯ್ಯಲಾಯಿತು. ಅಕ್ಟೋಬರ್ 26ರಂದು ಮಹಿಳೆಯ ಸಂಬಂಧಿ ಮೊಹಮ್ಮದ್ ರಶೀದ್ ಅವರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಅಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.

ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪತಿ ಮೊಹಮ್ಮದ್ ಫಯಾಜ್ ಸೇರಿದಂತೆ ನಾಲ್ವರು ಪುರುಷರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!