ಕೇರಳ: ಶಾಲೆಗೆ ಹೋಗುವುದಾಗಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಅನುಮೋಳ್ (ಕುಡಲಿಲ್) ಅವರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಪುತ್ತುಸ್ಸೇರಿಯಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಗೆಳೆಯ ಅಬ್ದುಲ್ ಸಮದ್ ಜೊತೆ ವಾಸಿಸುತ್ತಿದ್ದ ಅನುಮೋಳ್ ಅವರನ್ನು ತೊಟ್ಟಿಲ್‌ಪಾಲಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಝಿಕ್ಕೋಡ್ ಜಿಲ್ಲೆಯ ಮೊಯಿಲೋಥರ ಸರ್ಕಾರಿ ಎಲ್‌ಪಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅನುಮೋಳ್ ಐದನೇ ತಾರೀಖಿನಿಂದ ನಾಪತ್ತೆಯಾಗಿದ್ದರು. ಕುಟುಂಬದವರು ನೀಡಿದ ದೂರಿನ ಮೇರೆಗೆ ನಾದಾಪುರಂ ಡಿವೈಎಸ್‌ಪಿ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಅಬ್ದುಲ್ ಸಮದ್ ಅವರ ಮೊಬೈಲ್ ಫೋನ್‌ ಆಧರಿಸಿ ನಡೆಸಿದ ಸೈಬರ್ ತನಿಖೆಯ ಮೂಲಕ ಇಬ್ಬರಿರುವ ಸ್ಥಳವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಡಕರದ ತೋಡನ್ನೂರು ಮೂಲದ ಅಬ್ದುಲ್ ಸಮದ್ ವಿರುದ್ಧ ಹಲವು ಪ್ರಕರಣಗಳಿದ್ದು, ಈ ಹಿಂದೆ ಮಾದಕ ದ್ರವ್ಯ ಪ್ರಕರಣದಲ್ಲೂ ಬಂಧನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಗೆ ಯಕೃತ್ತಿನ ಅರ್ಧ ಭಾಗ ದಾನ ಮಾಡಿದ್ದ ಪತಿ!

ಅನುಮೋಳ್ ಅವರ ವೈಯಕ್ತಿಕ ಜೀವನದ ಹಿನ್ನೆಲೆಯೂ ಈ ಪ್ರಕರಣಕ್ಕೆ ವಿಶೇಷ ಗಮನ ಸೆಳೆಯುವಂತಿದೆ. ತೊಟ್ಟಿಲ್‌ಪಾಲಂನ ಕುಡಲಿಲ್ ನಿವಾಸಿಗಳಾದ ಕಣ್ಣನ್ ಮತ್ತು ಎಲಮ್ಮ ದಂಪತಿಯ ಏಕೈಕ ಪುತ್ರಿಯಾಗಿರುವ ಅನುಮೋಳ್‌ಗೆ ಪತಿ ಸುಭಾಷ್ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಗಂಭೀರ ಯಕೃತ್ತಿನ ಕಾಯಿಲೆಗೆ ತುತ್ತಾಗಿದ್ದ ಅನುಮೋಳ್ ಅವರ ಜೀವ ಉಳಿಸಲು ಪತಿ ಸುಭಾಷ್ ತಮ್ಮ ಯಕೃತ್ತಿನ ಅರ್ಧ ಭಾಗವನ್ನೇ ದಾನ ಮಾಡಿದ್ದರು.

ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಈ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಮತ್ತು ಅನುಮೋಳ್ ಬದುಕುಳಿದ ಘಟನೆ ಆ ಸಂದರ್ಭದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ವಿದೇಶಗಳಿಂದಲೂ ಅನೇಕರು ಅವರಿಗೆ ಆರ್ಥಿಕ ನೆರವು ನೀಡಿದ್ದರು. ಇದೀಗ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಶಿಕ್ಷಕಿ ನಾಪತ್ತೆಯಾಗಿದ್ದು, ಕೊನೆಗೆ ಗೆಳೆಯನೊಂದಿಗೆ ಬಾಡಿಗೆ ಮನೆಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!