ಮುಂಡಗೋಡ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ದೆಯನ್ನು ಹತ್ಯೆ ಮಾಡಿರೋ ದುಷ್ಕರ್ಮಿಗಳು, ಚಿನ್ನಾಭರಣ ಹಾಗೂ ನಗದು ಹಣ ದೋಚಿಕೊಂಡು ಹೋಗಿರುವ ಘಟನೆ ಇಡೀ ಮುಂಡಗೋಡ ತಾಲೂಕನ್ನೇ ಬೆಚ್ಚಿ ಬೀಳಿಸಿದೆ.
ಆಲಳ್ಳಿ ಗ್ರಾಮದ ಕಮಲವ್ವ ತಿರುಕಪ್ಪ ಆಡೂರ (75) ಎಂಬಾಕೆಯೇ ಭೀಕರವಾಗಿ ಕೊಲೆಯಾದ ವೃದ್ಧೆಯಾಗಿದ್ದಾಳೆ.

ಕೊಲೆಯಾದ ಕಮಲವ್ವಗೆ 5 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಮನೆಯ ಪಕ್ಕದಲ್ಲೇ ಮಗನ ಮನೆ ಇದೆ. ಆದರೆ ನಿನ್ನೆ ಮಗ ಹಾಗೂ ಸೊಸೆ ಊರಿಗೆ ತೆರಳಿದ್ದರು ಎನ್ನಲಾಗಿದೆ. ಮತ್ತೊಬ್ಬ ಮಗ ಚಿತ್ರದುರ್ಗದಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ವೃದ್ದೆ ಮನೆಯಲ್ಲಿ ಒಬ್ಬರೇ ಇದ್ದುದನ್ನು ಗಮನಿಸಿದ ದುಷ್ಕರ್ಮಿಗಳು ರಾತ್ರಿ ಮನೆಗೆ ನುಗ್ಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ವೃದ್ಧೆಯ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.70 ಲಕ್ಷರೂ. ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಮುಂಡಗೋಡ ಪಿಐ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ನೇತೃತ್ವದ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಧ್ಯಾಹ್ನ ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಲಾಯಿತು. ಶ್ವಾನವು ವೃದ್ಧೆಯ ಮನೆಯ ಸುತ್ತಮುತ್ತ ಹಾಗೂ ಸುತ್ತಮುತ್ತಲಿನ ಓಣಿಯಲ್ಲಿ ಸುತ್ತಾಡಿ ಮರಳಿದೆ ಎನ್ನಲಾಗಿದೆ

error: Content is protected !!