ಬೆಳಗಾವಿ: ಹೆತ್ತವರ ಪ್ರೀತಿಯಂತೆ ಮೊಮ್ಮಗನನ್ನು ಸಾಕಿ ಬೆಳೆಸಿದ್ದ ಅಜ್ಜಿಯನ್ನೇ ಹಣದ ಆಸೆಗೆ ಮೊಮ್ಮಗ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಬರುತ್ತಿದ್ದ ಹಣದಲ್ಲಿ ಪಾಲು ನೀಡುವಂತೆ ಪೀಡಿಸುತ್ತಿದ್ದ ಮೊಮ್ಮಗ, ಅಜ್ಜಿ ಹಣ ನೀಡಲು ನಿರಾಕರಿಸಿದ್ದಕ್ಕೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಡ್ಯಾಂ ಹಿನ್ನೀರಿಗೆ ಎಸೆದಿದ್ದಾನೆ.
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ 78 ವರ್ಷದ ಹಮ್ಮವ್ವ ಬಾಲಪ್ಪ ಸನದಿ ಕೊಲೆಯಾದ ವೃದ್ಧೆ. ಕೊಲೆ ಆರೋಪದ ಮೇಲೆ ಅವರ 20 ವರ್ಷದ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಸಂತೆ ನೆಪದಲ್ಲಿ ಕರೆದುಕೊಂಡು ಹೋಗಿ ಕೊಲೆ
ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗುವುದಾಗಿ ಹೇಳಿ ಮೊಮ್ಮಗ ಭೀಮಪ್ಪ ತನ್ನ ಅಜ್ಜಿ ಹಮ್ಮವ್ವ ಅವರನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಅರಳಿಕಟ್ಟಿ ಗ್ರಾಮದ ಹೊರವಲಯದಲ್ಲಿ ಮತ್ತೆ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಕೇಳಿದ್ದಾನೆ. ಆದರೆ, ಅಜ್ಜಿ ಹಣ ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಭೀಮಪ್ಪ ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಡ್ಯಾಂಗೆ ಎಸೆದ
ಕೊಲೆ ಮಾಡಿದ ಬಳಿಕ ಅಜ್ಜಿಯ ಬಳಿಯಿದ್ದ 2,300 ರೂ. ಹಣವನ್ನು ತೆಗೆದುಕೊಂಡಿದ್ದಾನೆ. ನಂತರ ಶವವನ್ನು ಗೋಣಿಚೀಲಗಳಲ್ಲಿ ಕಟ್ಟಿ, ರಾತ್ರಿ ವೇಳೆ ಸಂಜಿನಜಾಳ ಗ್ರಾಮದ ಡ್ಯಾಂ ಹಿನ್ನೀರಿನ ಪ್ರದೇಶಕ್ಕೆ ಸಾಗಿಸಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಶವದ ಮೇಲೆ ಕಲ್ಲುಗಳನ್ನು ಇರಿಸಿ ನೀರಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ಐದು ದಿನಗಳ ಬಳಿಕ ಬಯಲಾದ ಕೊಲೆ ರಹಸ್ಯ
ನವೆಂಬರ್ 15ರಂದು ಡ್ಯಾಂ ಹಿನ್ನೀರಿನಲ್ಲಿ ಹಮ್ಮವ್ವ ಅವರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಮೊಮ್ಮಗ ಭೀಮಪ್ಪನ ಮೇಲೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗೃಹಲಕ್ಷ್ಮಿ ಹಣದ ಮೇಲಿನ ಆಸೆಗೆ ಅಜ್ಜಿಯನ್ನೇ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ವಿಚಾರಣೆ ವೇಳೆ ಆರೋಪಿ ಭೀಮಪ್ಪ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಣದ ಆಸೆಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮೊಮ್ಮಗನೇ ಅಜ್ಜಿಯ ಪ್ರಾಣ ತೆಗೆದಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಕರ್ನಾಟಕದಲ್ಲಿ ಸ್ವಂತ ಮನೆ ಹಾಗೂ ನಿವೇಶನ ಹೊಂದುವ ಕನಸು ಕಾಣುತ್ತಿರುವ ಬಡ ಮತ್ತು ಶ್ರಮಿಕ ವರ್ಗದ ಜನರಿಗೆ ರಾಜ್ಯ ಸರ್ಕಾರ…
ವಿಚ್ಛೇದನದ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ದಂಪತಿ, ಕೊನೆಯ ಕ್ಷಣದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ಇದೀಗ…
ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ…
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ – ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು…
ಗೌರಿಬಿದನೂರು: ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿ ಹಾಡಹಗಲೇ ಕಳ್ಳರು ಕಾರಿನ ಗಾಜು ಒಡೆದು 12.20 ಲಕ್ಷ ರೂ. ನಗದು ದೋಚಿ…
ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ (RFO) ಹೇಮಂತ್‌ಕುಮಾರ್ ಅವರಿಗೆ ಸಂಬಂಧಿಸಿದ…