ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾರತೀಯ ವಾಯುಸೇನೆಯ (IAF) ಅಧಿಕಾರಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದಲ್ಲದೆ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವ ಗಂಭೀರ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

24 ವರ್ಷದ ಮಹಿಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಆಕೆಯ ಹಳೆಯ ಸಹಪಾಠಿ ಅಯಾಜ್ ತಾಜ್ ಮದಾರೆ (26) ಆಸ್ತಿ ವ್ಯವಹಾರದ ನೆಪದಲ್ಲಿ ವರ್ಧಾ ರಸ್ತೆಯಲ್ಲಿರುವ ಹೋಟೆಲ್‌ಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲಿ ಮಹಿಳೆಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಘಟನೆಯ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ದೃಶ್ಯಗಳನ್ನು ಆಧಾರವನ್ನಾಗಿ ಮಾಡಿಕೊಂಡು ಆರೋಪಿ ಮಹಿಳೆಯನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದು, ಹಲವು ಬಾರಿ ಲೈಂಗಿಕ ಶೋಷಣೆ ನಡೆಸಿದ್ದಾನೆ. ಜೊತೆಗೆ, ಆಕೆಯಿಂದ ಸುಮಾರು 3.09 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವುದಾಗಿಯೂ ಆರೋಪಿಸಲಾಗಿದೆ.

ದೂರಿನ ಪ್ರಕಾರ, ಮೇ 2025ರಲ್ಲಿ ಅಯಾಜ್ ಮದಾರೆ ಮಹಿಳೆಯನ್ನು ಕಲ್ಮೇಶ್ವರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತನ್ನ ಸಹಚರರಾದ ಅಮೀನ್ ಶೇಖ್ ಮತ್ತು ಹಜರತ್ ಮೌಲಾನಾ ಅವರೊಂದಿಗೆ ಸೇರಿ ಬಲವಂತದ ಧರ್ಮಾಂತರದ ವಿಧಿವಿಧಾನಗಳನ್ನು ನಡೆಸಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನನ್ನು ಬಿಡುವಂತೆ ಮನವಿ ಮಾಡುತ್ತಿದ್ದರೂ, ಆರೋಪಿಗಳು ಆಕೆಯನ್ನು ಬಲವಂತಪಡಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ ತನ್ನ ಪತಿಗೆ ಮಹಿಳೆ ನಡೆದ ಘಟನೆಗಳ ಕುರಿತು ಮಾಹಿತಿ ನೀಡಿದ್ದು, ಬಳಿಕ ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಅತ್ಯಾಚಾರ, ಸುಲಿಗೆ, ಬಲವಂತದ ಧರ್ಮಾಂತರ ಹಾಗೂ ಮಹಾರಾಷ್ಟ್ರದ ಬ್ಲ್ಯಾಕ್ ಮ್ಯಾಜಿಕ್ (ಮಾಟಮಂತ್ರ ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿಗಳಾದ ಅಯಾಜ್ ಮದಾರೆ ಮತ್ತು ಅಮೀನ್ ಶೇಖ್ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ತಲೆಮರೆಸಿಕೊಂಡಿರುವ ಮೂರನೇ ಆರೋಪಿ ಹಜರತ್ ಮೌಲಾನಾ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Related News

error: Content is protected !!