ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು, ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿ ಜೆ. ಮಹೇಶ್ ಅವರು ಶನಿವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕಳೆದ ವರ್ಷ ಭಟ್ಕಳ ಉಪ ವಿಭಾಗಾಧಿಕಾರಿಯಾಗಿದ್ದ ಡಾ. ನಯನ್ ಎನ್. ಅವರ ವರ್ಗಾವಣೆಯ ಬಳಿಕ ಈ ಹುದ್ದೆ ತೆರವಾಗಿತ್ತು. ಬಳಿಕ ಶಿರಸಿ ಉಪ ವಿಭಾಗಾಧಿಕಾರಿಯಾಗಿದ್ದ ಕುಮಾರಿ ಕಾವ್ಯರಾಣಿ ಅವರಿಗೆ ಭಟ್ಕಳದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ನಂತರ ಅವರೂ ವರ್ಗಾವಣೆಗೊಂಡ ಹಿನ್ನೆಲೆ, ಹುದ್ದೆ ಮತ್ತೆ ಖಾಲಿಯಾಗಿದ್ದು ಆಡಳಿತಾತ್ಮಕ ಕಾರ್ಯಗಳಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದವು.
ಈ ಮಧ್ಯೆ ಹೊನ್ನಾವರ ತಹಶೀಲ್ದಾರ್ ಪ್ರವೀಣ್ ಕರಂಡೆ ಅವರು ಪ್ರಭಾರಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಾಯಂ ಎಸಿ ಇಲ್ಲದ ಕಾರಣ ಸಾರ್ವಜನಿಕರ ದಿನನಿತ್ಯದ ಆಡಳಿತಾತ್ಮಕ ಕೆಲಸಗಳು ವಿಳಂಬವಾಗುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು “ಭ್ರಷ್ಟರ ಬೇಟೆ” ಪತ್ರಿಕೆಯ ತಂಡ ಕಳೆದ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ಮುಖಪುಟ ಸುದ್ದಿಯಾಗಿ ಪ್ರಕಟಿಸಿ ಸಚಿವರು, ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಇದೀಗ ಸರ್ಕಾರ ಭಟ್ಕಳಕ್ಕೆ ಕಾಯಂ ಉಪ ವಿಭಾಗಾಧಿಕಾರಿಯನ್ನು ನೇಮಕ ಮಾಡುವ ಮೂಲಕ ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ.
ರಾಜ್ಯ ಸರ್ಕಾರದ ಇತ್ತೀಚಿನ ವರ್ಗಾವಣೆ ಆದೇಶದಂತೆ ಭಟ್ಕಳಕ್ಕೆ ಬಂದಿರುವ ಜೆ. ಮಹೇಶ್ ಅವರು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಆಡಳಿತಾತ್ಮಕ ಅನುಭವ ಹೊಂದಿದ ಅಧಿಕಾರಿಯಾಗಿದ್ದಾರೆ.
ಹೊಸ ಉಪ ವಿಭಾಗಾಧಿಕಾರಿಯ ನೇಮಕದಿಂದ ಭಟ್ಕಳ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕುಗಳ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
