ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ನಡೆಯಲಿದ್ದ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಮಯೋಚಿತವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಸಹಾಯವಾಣಿ (1098)ಗೆ ಬಂದ ದೂರಿನ ಆಧಾರದ ಮೇಲೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನು ರಕ್ಷಿಸಿದ್ದಾರೆ.

ಜುಲೈ 9, 2026ರಂದು ಮಕ್ಕಳ ಸಹಾಯವಾಣಿಗೆ ಮುಂಡಗೋಡು ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಗೆ ಬಾಲ್ಯ ವಿವಾಹ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಮಾಹಿತಿ ಪಡೆದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್. ಅವರು ವಿಶೇಷ ತಂಡವನ್ನು ರಚಿಸಿ ಸ್ಥಳಕ್ಕೆ ಕಳುಹಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ಜಿ. ಅವರು ಬಾಲ್ಯ ವಿವಾಹದ ಕಾನೂನು ಪರಿಣಾಮಗಳು ಹಾಗೂ ಅದರ ದುಷ್ಪರಿಣಾಮಗಳ ಕುರಿತು ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.

ಬಳಿಕ ಬಾಲಕಿಯ ತಂದೆ-ತಾಯಿಯಿಂದ ಇನ್ನು ಮುಂದೆ ಬಾಲ್ಯ ವಿವಾಹ ನಡೆಸುವುದಿಲ್ಲ ಎಂಬ ಮುಚ್ಚಳಿಕೆ ಪತ್ರವನ್ನು ಪಡೆದುಕೊಳ್ಳಲಾಯಿತು. ಇದೇ ವೇಳೆ ರಕ್ಷಣಾಧಿಕಾರಿ ವಿಶ್ವನಾಥ್ ಅಶೋಕ್ ನಾಯಕ್ ಅವರು ಬಾಲಕಿಯ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯದ ಮಹತ್ವವನ್ನು ವಿವರಿಸಿ ಕುಟುಂಬಕ್ಕೆ ಸೂಕ್ತ ಸಲಹೆ ಮತ್ತು ಸಾಂತ್ವನ ನೀಡಿದರು.

ಮಕ್ಕಳ ಸಹಾಯವಾಣಿ ಸಿಬ್ಬಂದಿ ಆಶಾ ಫರ್ನಾಂಡಿಸ್ ಅವರು ಇಂತಹ ಘಟನೆಗಳು ಕಂಡುಬಂದರೆ ತಕ್ಷಣ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್. ಅವರ ತ್ವರಿತ ಕ್ರಮದಿಂದ ಬಾಲ್ಯ ವಿವಾಹವನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಾಗಿದ್ದು, ಕಾರ್ಯಾಚರಣೆಯಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ್, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಸಿಬ್ಬಂದಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ: ಮಂಜುನಾಥ್ ಮೊಗೇರ

Related News

error: Content is protected !!