ವಿಜಯಪುರ: ರೈತರಿಗೆ ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅದರ ಭಾಗವಾಗಿ ಬಸವನ ಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕೆಬಿಜೆಎನ್ಎಲ್ ವತಿಯಿಂದ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರ ಅಮರಗೋಂಡ ಮೇಟಿ ಅವರಿಂದ ಕಾಮಗಾರಿ ನಡೆಯುತ್ತಿದ್ದು, ಕೆಲವು ಭಾಗಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಕಬ್ಬಿಣ ಬಳಸದೇ, ಕಳಪೆ ಗುಣಮಟ್ಟದ ಕಾಂಕ್ರೀಟ್ನಿಂದ ಕಾಮಗಾರಿ ನಡೆಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ನಿರ್ಮಾಣದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಟಕ್ಕಳಕಿ ಗ್ರಾಮದ ರೈತ ರುದ್ರಗೌಡ ಮಹದೇವಪ್ಪಗೌಡ ಬಿರಾದಾರ ಮಾತನಾಡಿ, ಕಾಮಗಾರಿಯಲ್ಲಿನ ಅವ್ಯವಸ್ಥೆ ಕುರಿತು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಕೆಲಸಗಾರರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ರೈತರಿಗೆ ದೀರ್ಘಕಾಲ ಉಪಯೋಗವಾಗುವ ರೀತಿಯಲ್ಲಿ ಗುಣಮಟ್ಟದ ಕಾಲುವೆ ನಿರ್ಮಾಣವಾಗಬೇಕು ಎಂದು ಅವರು ಆಗ್ರಹಿಸಿದರು.
ಕೆಬಿಜೆಎನ್ಎಲ್ ಇಲಾಖೆಯ ಎಸ್ಇ ಗೋವಿಂದ ರಾಠೋಡ, ಇಇ ವಿದ್ಯಾಧರ ಹಾಗೂ ಎಇ ಅನೀಲ ರಾಠೋಡ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಗ್ರಾಮೀಣ ಭಾಗದ ರೈತರೆಲ್ಲರೂ ಸೇರಿ ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ಸಂಗಪ್ಪ ಚಲವಾದಿ
