ಮೊದಲ ನೋಟಕ್ಕೆ ಸಾಮಾನ್ಯ ಸ್ನೇಹದಂತೆ ಆರಂಭವಾದ ಪರಿಚಯ, ಬಳಿಕ ಪ್ರೇಮ ಸಂಬಂಧವಾಗಿ ಬೆಳೆದು ಕೊನೆಗೆ ಭೀಕರ ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಗಂಡನಿಂದ ದೂರವಾಗಿ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರಿಯಕರನ ಕೈಯಲ್ಲಿ ಹತ್ಯೆಯಾಗಿದ್ದು, ತನಿಖೆಯ ಭಯದಿಂದ ಆರೋಪಿ ತನ್ನ ತಾಯಿಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಳಿನಿ ಎಂಬ ಮಹಿಳೆ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸವಿದ್ದು, ಕೆಲವು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ರಾಜಶೇಖರ ಎಂಬಾತನ ಪರಿಚಯವಾಗಿತ್ತು. ಪರಿಚಯವು ಬಳಿಕ ಆತ್ಮೀಯ ಸಂಬಂಧವಾಗಿ ಬೆಳೆದಿದ್ದು, ಇಬ್ಬರೂ ಹಲವು ಕಡೆ ಒಟ್ಟಿಗೆ ಸಂಚರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಕಳೆದ ಕೆಲವು ವಾರಗಳಿಂದ ನಳಿನಿ ರಾಜಶೇಖರನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಆದರೆ ರಾಜಶೇಖರ ಮದುವೆಗೆ ನಿರಾಕರಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣದಿಂದ ನಳಿನಿಯನ್ನು ಕೊಲೆ ಮಾಡಲು ರಾಜಶೇಖರ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಳಿನಿಯನ್ನು ನಂಬಿಸಿ ಕರೆದುಕೊಂಡು ಹೋದ ರಾಜಶೇಖರ, ಆಕೆಯನ್ನು ಹತ್ಯೆ ಮಾಡಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಜವನಹಳ್ಳಿಗುಡ್ಡದ ಸಮೀಪ ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದ ತನಿಖೆ ವೇಳೆ ಬೆಳಕವಾಡಿ ಟೋಲ್ ಪ್ಲಾಜಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಹತ್ಯೆಯಾದ ಬಳಿಕ ನಳಿನಿಯ ಮೃತದೇಹವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಇರಿಸಿಕೊಂಡೇ ರಾಜಶೇಖರ ಸಂಚರಿಸಿದ್ದಾನೆ ಎಂಬ ಅಂಶವನ್ನು ಪತ್ತೆಹಚ್ಚಿದ್ದಾರೆ.

ಇದಾದ ಬಳಿಕ ಪೊಲೀಸರು ವಿಚಾರಣೆಗೆ ಕರೆಸಿದಾಗ ರಾಜಶೇಖರ ಕಾರನ್ನು ಮಾರಾಟ ಮಾಡಿರುವುದಾಗಿ ಸುಳ್ಳು ಮಾಹಿತಿ ನೀಡಿ ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಂತೆ ಬಂಧನದ ಭಯದಿಂದ ಜೂನ್ 28ರಂದು ತನ್ನ ತಾಯಿಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಘಟನೆಯ ಎಲ್ಲ ಆಯಾಮಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Related News

error: Content is protected !!