
ಹೊನ್ನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಘಟನೆ; ಬೊಲೆರೋದಲ್ಲಿದ್ದ ಇಬ್ಬರ ಕಾಲು ಮುರಿತ
ಲಿಂಗಸುಗೂರು: ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಬುಧವಾರ ಸಂಜೆ ಥಾರ್ ಹಾಗೂ ಬೊಲೆರೋ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ನಾಗಪ್ಪ ವಜ್ಜಲ್ ಅವರ ಪುತ್ರ ಮಲ್ಲೇಶ್ ವಜ್ಜಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದ ಸಿರವಾರದ ವೆಂಕಟೇಶ ಹಾಗೂ ವಿಜಯಲಕ್ಷ್ಮೀ ಅವರ ಕಾಲುಗಳು ಮುರಿದಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ವೆಂಕಟೇಶ ಹಾಗೂ ವಿಜಯಲಕ್ಷ್ಮೀ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶ್ ವಜ್ಜಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






