ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಗ್ರಾಮಸ್ಥರ ಹೇಳುವಂತೆ, ಕಾಮಗಾರಿಯನ್ನು ಅನುಮೋದಿತ ನೀಲನಕ್ಷೆ ಹಾಗೂ ತಾಂತ್ರಿಕ ಮಾನದಂಡಗಳನ್ನು ಪಾಲಿಸದೇ ನಡೆಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಬಳಸಿರುವ ಸಾಮಗ್ರಿಗಳ ಗುಣಮಟ್ಟ ಸಮರ್ಪಕವಾಗಿಲ್ಲ. ಅಲ್ಲದೆ, ಸ್ವಚ್ಛಗೊಳಿಸದ ಹಾಗೂ ಕೊಳಚೆ ಇರುವ ರಸ್ತೆಯ ಮೇಲೆಯೇ ಕಾಂಕ್ರೀಟ್ ಸುರಿದಿರುವ ಪರಿಣಾಮ, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಸ್ತೆ ಕೆಲವೆಡೆ ಕಿತ್ತುಹೋಗಿರುವುದು ಕಂಡುಬಂದಿದೆ.

ಸಾರ್ವಜನಿಕರ ಪ್ರಕಾರ, ಕಾಮಗಾರಿಯಲ್ಲಿ ಗುಣಮಟ್ಟಕ್ಕಿಂತ ಹಣದ ದುರುಪಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ದಲಿತ ಕಾಲೋನಿಯ ನಿವಾಸಿಗಳು ಪ್ರತಿನಿತ್ಯ ಸಂಚರಿಸುವ ಪ್ರಮುಖ ಮಾರ್ಗವಾಗಿದ್ದು, ಕಳಪೆ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ಪಷ್ಟ ಉತ್ತರ ದೊರೆತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಆದ್ದರಿಂದ, ಇಲಾಖೆಯ ಸಹಾಯಕ ಇಂಜಿನಿಯರ್ ವಿಲಾಸ ರಾಠೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಸಮಗ್ರ ಪರಿಶೀಲನೆ ನಡೆಸಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಸಂಗಪ್ಪ ಚಲವಾದಿ
