ಹಳಿಯಾಳ: ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್‌ಗಳು ಸೋಮವಾರ ಮುಂಜಾನೆ ಭಾರೀ ಸ್ಫೋಟಗೊಂಡ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದ್ದು, ಗ್ರಾಮಸ್ಥರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಬೆಳಿಗ್ಗೆ ಸುಮಾರು 5.10 ಗಂಟೆ ಸುಮಾರಿಗೆ ಸಂಭವಿಸಿದ ಸ್ಫೋಟದ ತೀವ್ರತೆಗೆ ಆರೋಪಿಯ ಮನೆಯ ಹಂಚುಗಳು, ಅಡುಗೆ ಮನೆಯ ಕಿಟಕಿಯ ಗಾಜುಗಳು ಹಾಗೂ ಸುತ್ತಮುತ್ತಲಿನ ಮನೆಗಳ ಬಾಗಿಲು ಮತ್ತು ಹಂಚುಗಳು ಹಾನಿಗೊಳಗಾಗಿವೆ. ಘಟನೆಯಿಂದ ಸುಮಾರು ₹1.15 ಲಕ್ಷ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಕಾಳಗಿನಕೊಪ್ಪ ಗ್ರಾಮದ ವಸಂತ ಅಲಿಯಾಸ್ ವಾಸು ರಾಯಪ್ಪ ಕೊರವರ (52) ಹಾಗೂ ಅವರ ಪುತ್ರ ಮುನೇಶ್ವರ ವಸಂತ ಕೊರವರ ತಮ್ಮ ಮನೆಯಲ್ಲಿ ಕಾನೂನುಬಾಹಿರವಾಗಿ ನಾಡಬಾಂಬ್‌ಗಳು ಹಾಗೂ ಇತರೆ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಅವು ಸ್ಫೋಟಗೊಂಡ ಪರಿಣಾಮ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಘಟನೆಯ ಬಳಿಕ ಮನೆಯಲ್ಲಿ ಉಳಿದಿದ್ದ ನಾಡಬಾಂಬ್‌ಗಳೊಂದಿಗೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ರೈತ ಮಾರುತಿ ಅಪ್ಪಯ್ಯ ಬಿಡದೋಳಕರ ನೀಡಿದ ದೂರಿನ ಆಧಾರದ ಮೇಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಷ್ಠಗೌಡ ಅರಕೇರಿ ನಡೆಸುತ್ತಿದ್ದಾರೆ.

Related News

error: Content is protected !!