
ಬೆಳಗಾವಿ ಜಿಲ್ಲೆಯ ಮಾರಿಹಾಳದಲ್ಲಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದ್ದು, ಬಸವರಾಜ್ ಸೀತಿಮನಿ ಎಂಬ ವ್ಯಕ್ತಿ ತನ್ನ ಸ್ನೇಹಿತ ಆಸೀಫ್ ಪತ್ನಿ ಮಾಸಾಬಿ ಜತೆಗೆ ಪರಾರಿಯಾಗಿದ್ದ. ಈ ಘಟನೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ, ಈ ಜೋಡಿ ಈಗ ಬೆಳಗಾವಿಗೆ ಮರಳಿದ್ದು, ಬಸವರಾಜನ ಪತ್ನಿ ವಾಣಿಶ್ರೀ ಅವರ ಕಣ್ಣಿಗೆ ಬಿದ್ದಿದ್ದಾರೆ.
ನಡುಬೀದಿಯಲ್ಲಿ ಜಗಳ, ಹೊಡೆದಾಟ
ಬೆಳಗಾವಿಯ ಕೊಲ್ಲಾಪುರ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಸವರಾಜ್ ಮತ್ತು ಮಾಸಾಬಿಯನ್ನು ಕಂಡ ವಾಣಿಶ್ರೀ, ಕೋಪೋದ್ರಿಕ್ತಳಾಗಿ ನೇರವಾಗಿ ಮಾಸಾಬಿಯ ಮುಂದೆ ಹೋಗಿ ತಮ್ಮ ಗಂಡನನ್ನು ಮತ್ತು ಮಕ್ಕಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಮಾತಿನ ಚಕಮಕಿ ಹೆಚ್ಚಾಗಿ, ಅದು ವಾಗ್ವಾದಕ್ಕೆ ತಿರುಗಿ, ಕೊನೆಗೆ ಇಬ್ಬರು ಮಹಿಳೆಯರು ಬೀದಿಯಲ್ಲೇ ಜಡೆ ಹಿಡಿದು ಹೊಡೆದಾಡಲು ಶುರುವಿಟ್ಟಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಅವರನ್ನು ತಮ್ಮ ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ.
ಘಟನೆ ಹಿನ್ನಲೆ
ಬಸವರಾಜ್ ಸೀತಿಮನಿ, ಮದುವೆಯಾದ ವ್ಯಕ್ತಿಯಾಗಿದ್ದು, ಮೂವರು ಮಕ್ಕಳ ತಂದೆಯಾಗಿದ್ದ. ಆದರೆ, ಅವನು ತನ್ನ ಸ್ನೇಹಿತ ಆಸೀಫ್ ಪತ್ನಿ ಮಾಸಾಬಿ ಜತೆಗೆ ಪರಾರಿಯಾಗಿದ್ದ. ಮಾಸಾಬಿ ತನ್ನ ಎರಡು ಮಕ್ಕಳನ್ನು ಕೊಂಡೊಯ್ಯುವುದರ ಜೊತೆಗೆ, 60 ಗ್ರಾಂ ಚಿನ್ನ, ಐದು ಲಕ್ಷ ರೂಪಾಯಿ ನಗದು, ಸೈಟ್ ದಾಖಲೆಗಳು, ಕಾರು ಹಾಗೂ ಮನೆಗೆ ಸೇರಿದ ಹಲವು ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಳು. ಬಸವರಾಜ್ ತನ್ನೊಬ್ಬ ಮಗನನ್ನು ಕರೆದುಕೊಂಡು ಹೋಗಿರುತ್ತಾನೆ.
ಆಕೆಯ ಗಂಡ ಆಸೀಫ್, ತನ್ನ ಆಸ್ತಿ ಕಳೆದುಕೊಂಡು ಕಂಗಾಲಾಗಿದ್ದನು. ಆತ ತನ್ನ ಪತ್ನಿಯನ್ನು ಹುಡುಕಲು ಜನವರಿ 2ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದ.
ಮತ್ತೊಂದೆಡೆ, ವಾಣಿಶ್ರೀ ಹಲವು ವರ್ಷಗಳಿಂದ ಪತಿಯ ಹಿಂಸೆ ಅನುಭವಿಸುತ್ತಾ ಇದ್ದರೂ, ಗಂಡನ ಈ ವರ್ತನೆಯಿಂದ ಆತಂಕಗೊಂಡು, ತನ್ನ ಇಬ್ಬರು ಮಕ್ಕಳೊಂದಿಗೆ ಬೀದಿಪಾಲಾಗಿದ್ದಳು.
ಈಗ, ಈ ಜೋಡಿ ಮತ್ತೆ ಬೆಳಗಾವಿಗೆ ಮರಳಿರುವ ಕಾರಣ, ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈ ಪ್ರಕರಣಕ್ಕೆ ಮುಂದೆ ಯಾವ ತಿರುವು ಸಿಗಲಿದೆ ಎಂಬುದು ನೋಡಬೇಕಾಗಿದೆ.






