ಶಿವಮೊಗ್ಗ: ಇನ್ನೂ ದಾಂಪತ್ಯ ಜೀವನದ ಸಂಭ್ರಮದಲ್ಲಿದ್ದ ನವಜೋಡಿಯ ಬದುಕಿನಲ್ಲಿ ವಿಧಿ ಕ್ರೂರ ಆಟವಾಡಿದೆ. ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಕಳೆದಿದ್ದ ದಂಪತಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗದ ಸಾಗರ ರಸ್ತೆ ಸಮೀಪದ ರಿಂಗ್ ರೋಡ್‌ನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕಿರಣ್ ಜಿ. (28) ಹಾಗೂ ಅವರ ಪತ್ನಿ ಸೌಮ್ಯ (22) ಎಂದು ಗುರುತಿಸಲಾಗಿದೆ. ಕಿರಣ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಕಿರಣ್ ಅವರು ಪತ್ನಿ ಸೌಮ್ಯ ಅವರೊಂದಿಗೆ ಶರಾವತಿ ನಗರದ ಮನೆಯಿಂದ ಗೋವಿಂದಪುರದಲ್ಲಿರುವ ಪತ್ನಿಯ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಸಾಗರ ರಸ್ತೆ ಸಮೀಪದ ರಿಂಗ್ ರೋಡ್‌ನಲ್ಲಿ ಅವರ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಬಿದ್ದ ದಂಪತಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಹೊಸ ಬದುಕಿನ ಕನಸು ಕಾಣುತ್ತಿದ್ದ ಜೋಡಿ ಮದುವೆಯಾದ ಒಂದೂವರೆ ತಿಂಗಳಲ್ಲೇ ಸಾವಿನ ಮನೆ ಸೇರಿರುವುದು ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಒಟ್ಟಿಗೆ ಅಂತ್ಯಸಂಸ್ಕಾರ:

ಘಟನೆಯ ಬಳಿಕ ಕೆಲ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಎದುರಾದರೂ, ಅಂತಿಮವಾಗಿ ದಂಪತಿಯ ಅಂತ್ಯಸಂಸ್ಕಾರವನ್ನು ಒಟ್ಟಿಗೆ ಶರಾವತಿ ನಗರದ ಸ್ಮಶಾನದಲ್ಲಿ ನೆರವೇರಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!