ಗೌರಿಬಿದನೂರು: ನಗರದ ಗಾಂಧಿ ವೃತ್ತದ ಸಮೀಪ ಮಂಗಳವಾರ ಬೆಳಿಗ್ಗೆ ಹಿರಿಯ ವಕೀಲರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ದಾಳಿಯಲ್ಲಿ ಕುತ್ತಿಗೆಗೆ ಗಂಭೀರ ಗಾಯಗೊಂಡಿರುವ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕಚೇರಿಗೆ ತೆರಳುತ್ತಿದ್ದಾಗ ದಾಳಿ

ಕಸಬಾ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡದಲ್ಲಿರುವ ತಮ್ಮ ಕಚೇರಿಗೆ ಮಂಗಳವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ವೆಂಕಟರಮಣಪ್ಪ ಅವರು ತೆರಳುತ್ತಿದ್ದರು. ಈ ವೇಳೆ ಕಟ್ಟಡದ ಮೊದಲ ಮಹಡಿಗೆ ಮೆಟ್ಟಿಲುಗಳ ಮೂಲಕ ಹೋಗುತ್ತಿದ್ದಾಗ ದುಷ್ಕರ್ಮಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ದಾಳಿಯಿಂದ ಅವರ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುವನ್ನು ಆಟೋ ಮೂಲಕ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಡಿಯೋ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದು ಕಟ್ಟಡದ ಕೆಳಭಾಗದಲ್ಲಿ ವಾಹನ ನಿಲ್ಲಿಸಿ ವಕೀಲರಿಗಾಗಿ ಕಾಯುತ್ತಿದ್ದ ಎನ್ನಲಾಗಿದೆ. ವೆಂಕಟರಮಣಪ್ಪ ಅವರು ಕಚೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ನಂತರ ಚಾಕುವನ್ನು ಸಮೀಪದ ತಾಲೂಕು ಆರೋಗ್ಯ ಇಲಾಖೆಯ ಕಚೇರಿ ಆವರಣದ ಕಡೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರಿಂದ ತನಿಖೆ ಚುರುಕು

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಜಗನ್ನಾಥ ರೈ ಹಾಗೂ ಗೌರಿಬಿದನೂರು ನಗರ ಠಾಣೆಯ ಪಿಎಸ್ಐ ವರಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಘಟನೆಯ ಬಳಿಕ ಸ್ಥಳದಲ್ಲಿ ಹಾಗೂ ಆಸ್ಪತ್ರೆಯ ಬಳಿ ವಕೀಲರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಹಾಡಹಗಲೇ ನಡೆದ ದಾಳಿಯಿಂದ ಆತಂಕ

ನಗರದ ಜನನಿಬಿಡ ವಾಣಿಜ್ಯ ಪ್ರದೇಶದಲ್ಲಿ ಹಾಡಹಗಲೇ ನಡೆದಿರುವ ಈ ಘಟನೆ ವಕೀಲರ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಕೀಲರ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಶೀಘ್ರ ಬಂಧಿಸಿ, ಕೃತ್ಯದ ಹಿಂದಿನ ನಿಖರ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಅವಿನಾಶ್

Related News

error: Content is protected !!