ಸೋನ್‌ಭದ್ರ: ಗಂಡ ನೈಟ್ ಡ್ಯೂಟಿಗೆ ಹೋದ ಬಳಿಕ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ, ಕೊನೆಗೆ ತನ್ನ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ನಡೆದಿದೆ.

ಎನ್‌ಸಿಎಲ್ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಮಾ ಶಂಕರ್ ಮಿಶ್ರಾ ಹತ್ಯೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪ್ರಿಯಾಂಕಾ ಮಿಶ್ರಾ, ಆಕೆಯ ಪ್ರಿಯಕರ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನೈಟ್ ಡ್ಯೂಟಿ ವೇಳೆ ನಡೆಯುತ್ತಿತ್ತು ಪ್ರಿಯಕರನ ಭೇಟಿಯಂತೆ

ರಮಾ ಶಂಕರ್ ಅವರಿಗೆ ಆಗಾಗ್ಗೆ ರಾತ್ರಿ ಪಾಳಿ ಕರ್ತವ್ಯ ಇರುತ್ತಿತ್ತು. ಪತಿ ಕೆಲಸಕ್ಕೆ ತೆರಳುತ್ತಿದ್ದ ಸಮಯವನ್ನು ಬಳಸಿಕೊಂಡು ಪ್ರಿಯಾಂಕಾ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸುತ್ತಿದ್ದಳು. ಬಳಿಕ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಆತನೊಂದಿಗೆ ಸಮಯ ಕಳೆಯುತ್ತಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.

ಆದರೆ ಒಂದು ರಾತ್ರಿ ನಡೆದ ಘಟನೆ ಇಡೀ ಪ್ರಕರಣಕ್ಕೆ ತಿರುವು ನೀಡಿದೆ.

ಮಧ್ಯರಾತ್ರಿ ಮನೆಗೆ ಬಂದ ಗಂಡ!

ಘಟನೆ ನಡೆದ ರಾತ್ರಿ ರಮಾ ಶಂಕರ್ ಅವರು ಕೆಲಸಕ್ಕೆ ತೆರಳುವಾಗ ಪ್ರಮುಖ ಫೈಲ್‌ವೊಂದನ್ನು ಮನೆಯಲ್ಲೇ ಮರೆತು ಹೋಗಿದ್ದರು. ಅದನ್ನು ತೆಗೆದುಕೊಂಡು ಹೋಗಲು ಮಧ್ಯರಾತ್ರಿ ಮತ್ತೆ ಮನೆಗೆ ವಾಪಸ್ ಬಂದಿದ್ದಾರೆ.

ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಅವರು ತಮ್ಮ ಬಳಿಯಿದ್ದ ಸ್ಪೇರ್ ಕೀ ಬಳಸಿ ಬಾಗಿಲು ತೆರೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಪತ್ನಿ ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವುದನ್ನು ಕಂಡಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ರಮಾ ಶಂಕರ್ ಮತ್ತು ಪ್ರಿಯಾಂಕಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಕುಕ್ಕರ್‌ನಿಂದ ತಲೆಗೆ ಹೊಡೆದು, ಬಳಿಕ ಉಸಿರುಗಟ್ಟಿಸಿ ಹತ್ಯೆ!

ವಿವಾದದ ವೇಳೆ ಪ್ರಿಯಾಂಕಾ ಪ್ರೆಶರ್ ಕುಕ್ಕರ್‌ನಿಂದ ರಮಾ ಶಂಕರ್ ಅವರ ತಲೆಗೆ ಹೊಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಡೆತಕ್ಕೆ ರಮಾ ಶಂಕರ್ ಕೆಳಗೆ ಬಿದ್ದ ಬಳಿಕ, ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊಲೆ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಇಬ್ಬರು ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಕಾಲ್‌ ಡೀಟೇಲ್ಸ್‌ನಿಂದ ಬಯಲಾಯ್ತು ಅಸಲಿ ಸತ್ಯ

ರಮಾ ಶಂಕರ್ ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ತನಿಖೆಯ ವೇಳೆ ಕಾಲ್‌ ಡೀಟೇಲ್ಸ್, ತಾಂತ್ರಿಕ ಸಾಕ್ಷ್ಯಗಳು ಸೇರಿದಂತೆ ಹಲವು ಮಾಹಿತಿಗಳನ್ನು ಪರಿಶೀಲಿಸಲಾಯಿತು.

ಸುದೀರ್ಘ ತನಿಖೆಯ ಬಳಿಕ ಪೊಲೀಸರಿಗೆ ಪತ್ನಿಯ ಮೇಲೆಯೇ ಅನುಮಾನ ಮೂಡಿದೆ. ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣದ ಹಿಂದಿನ ಅಸಲಿ ಸಂಗತಿಗಳು ಹೊರಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪ್ರಿಯಾಂಕಾ, ಆಕೆಯ ಪ್ರಿಯಕರ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ-ಪತ್ನಿಯ ನಡುವಿನ ನಂಬಿಕೆಗೆ ಧಕ್ಕೆ ತಂದಿದ್ದ ಸಂಬಂಧವೊಂದು ಕೊನೆಗೆ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದ್ದು, ಸೋನ್‌ಭದ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Related News

error: Content is protected !!