ನಾಲ್ಕು ದಿನಗಳ ಹಿಂದಷ್ಟೇ ಗೃಹಪ್ರವೇಶದಲ್ಲಿ ಸಂಭ್ರಮಿಸಿದ್ದಳು.. ಈಗ ಹೆತ್ತವರ ಕಣ್ಣ ಮುಂದೆ ಶವ!

ದಾವಣಗೆರೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ಮೃತಪಟ್ಟಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಎಂಬುವವರ ಪುತ್ರಿ ರಂಜಿತಾ ಮೃತಪಟ್ಟ ವಿದ್ಯಾರ್ಥಿನಿ.

ದಾವಣಗೆರೆಯ ಪ್ರತಿಷ್ಠಿತ ಟೀಮ್‌ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ, ಓದಿನಲ್ಲೂ ಉತ್ತಮ ಪ್ರತಿಭೆ ಹೊಂದಿದ್ದಳು ಎನ್ನಲಾಗಿದೆ. ಮಗಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಬಗ್ಗೆ ಪೋಷಕರು ಸಾಕಷ್ಟು ಕನಸುಗಳನ್ನು ಕಂಡಿದ್ದರು.

ಗೃಹಪ್ರವೇಶಕ್ಕೆ ಬಂದಿದ್ದ ಮಗಳು.. ಅದೇ ಕೊನೆಯ ಭೇಟಿಯಾಯ್ತು!

ನಾಲ್ಕೈದು ದಿನಗಳ ಹಿಂದಷ್ಟೇ ರಂಜಿತಾ ತನ್ನ ಸ್ವಗ್ರಾಮಕ್ಕೆ ತೆರಳಿದ್ದಳು. ಹೊಸದಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲೂ ಭಾಗವಹಿಸಿ, ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಸಂತಸದಿಂದ ಕಾಲ ಕಳೆದಿದ್ದಳು. ಬಳಿಕ ದಾವಣಗೆರೆಗೆ ಮರಳಿ ಹಾಸ್ಟೆಲ್‌ಗೆ ತೆರಳಿದ್ದಳು.

ಆದರೆ, ಅಂದು ಮನೆಯವರೊಂದಿಗೆ ನಗುನಗುತ್ತಾ ಬೆರೆತಿದ್ದ ಮಗಳೇ ತಮ್ಮ ಪಾಲಿಗೆ ಕೊನೆಯ ನೆನಪಾಗುತ್ತಾಳೆ ಎಂಬುದನ್ನು ಪೋಷಕರು ಊಹಿಸಿರಲಿಲ್ಲ.

ಬೆಳಗ್ಗೆಯಷ್ಟೇ ತಾಯಿಯೊಂದಿಗೆ ಮಾತನಾಡಿದ್ದಳು

ಘಟನೆ ನಡೆದ ದಿನ ಬೆಳಗ್ಗೆಯೂ ರಂಜಿತಾ ತನ್ನ ತಾಯಿಗೆ ಫೋನ್‌ ಮಾಡಿ ಎಂದಿನಂತೆ ಮಾತನಾಡಿದ್ದಳು ಎನ್ನಲಾಗಿದೆ. ಯಾವುದೇ ಅಸಹಜತೆಯ ಬಗ್ಗೆ ಆಕೆ ಮನೆಯವರಿಗೆ ತಿಳಿಸಿರಲಿಲ್ಲ.

ಸಂಜೆ ಸುಮಾರು 5.30ರ ವೇಳೆಗೆ ಕಾಲೇಜಿನಿಂದ ಹಾಸ್ಟೆಲ್‌ ಕೊಠಡಿಗೆ ತೆರಳಿದ್ದಾಳೆ ಎನ್ನಲಾಗಿದೆ. ರಾತ್ರಿ ಸುಮಾರು 8.30ರ ವೇಳೆಗೆ ಆಕೆಯ ಸ್ನೇಹಿತೆಯರು ಕೊಠಡಿಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್‌ ಆಗಿತ್ತು. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಗಾಬರಿಗೊಂಡ ವಿದ್ಯಾರ್ಥಿನಿಯರು ಹಾಸ್ಟೆಲ್‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ತೆರೆಯಲು ಮುಂದಾದಾಗ ರಂಜಿತಾ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

‘ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ’ ಎಂದ ಕುಟುಂಬ

ರಂಜಿತಾಳ ಸಾವಿನ ಬಗ್ಗೆ ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕಿಟಕಿಯ ಎತ್ತರ ಹಾಗೂ ಘಟನೆಯ ಸಂದರ್ಭಗಳನ್ನು ಪ್ರಶ್ನಿಸಿರುವ ಅವರು, ಇದು ಆತ್ಮಹತ್ಯೆಯೇ ಅಥವಾ ಸಾವಿನ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕೊಠಡಿಯಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಬೆಳಗ್ಗೆಯಷ್ಟೇ ಮನೆಯವರೊಂದಿಗೆ ಸಹಜವಾಗಿ ಮಾತನಾಡಿದ್ದ ರಂಜಿತಾ ಕೆಲವೇ ಗಂಟೆಗಳಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬ ಪ್ರಶ್ನೆಯೂ ಕುಟುಂಬಸ್ಥರನ್ನು ಕಾಡುತ್ತಿದೆ.

“ನಮ್ಮ ಮಗಳು ಹೇಡಿಯಲ್ಲ. ಆಕೆಯ ಸಾವಿನ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕು. ನಮಗೆ ನ್ಯಾಯ ಸಿಗಬೇಕು,” ಎಂದು ತಂದೆ ನಿಂಗಪ್ಪ ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಕಾಲೇಜು ಆಡಳಿತ ಹೇಳುವುದೇನು?

ಘಟನೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಟೀಮ್‌ ಅಕಾಡೆಮಿಯ ಚೇರ್ಮನ್‌ ಮಂಜಪ್ಪ ಪ್ರತಿಕ್ರಿಯಿಸಿ, ರಂಜಿತಾ ಊರಿನಿಂದ ಮರಳಿದ ಬಳಿಕ ಕೊಂಚ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.

ಮಗಳನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ರಂಜಿತಾಳ ಸಾವಿನ ನಿಖರ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಕುಟುಂಬಸ್ಥರ ಆರೋಪಗಳು ಸಾಬೀತಾಗಿಲ್ಲ. ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಬೇಕಿದೆ.

ಹೆತ್ತವರ ಕಣ್ಣಲ್ಲಿ ನೂರಾರು ಕನಸುಗಳನ್ನು ತುಂಬಿದ್ದ 17 ವರ್ಷದ ಮಗಳು ಹೀಗೆ ದಿಢೀರ್‌ ಆಗಿ ಕಣ್ಮರೆಯಾಗಿರುವುದು ಕುಟುಂಬಕ್ಕೆ ಆಘಾತ ತಂದಿದೆ.

Related News

error: Content is protected !!