ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ 14ನೇ ಆರೋಪಿ ಪ್ರದೂಷ್, ತನ್ನ 11 ಪುಟಗಳ ಅರ್ಜಿಯಲ್ಲಿ ತಾನು ಕಣ್ಣಾರೆ ಕಂಡಿದ್ದು, ಕೇಳಿದ್ದು ಹಾಗೂ ತನ್ನ ಗಮನಕ್ಕೆ ಬಂದಿದ್ದನ್ನು ವಿವರಿಸಿದ್ದಾನೆ ಎನ್ನಲಾಗಿದೆ.

ಪ್ರದೂಷ್‌ ಹೇಳಿಕೆಯ ಪ್ರಕಾರ, 2003ರಿಂದಲೇ ದರ್ಶನ್‌ ಅವರಿಗೆ ಪರಿಚಯವಿದ್ದು, ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಸ್ನೇಹ ಬೆಳೆದಿತ್ತು. ಜೂನ್‌ 8ರಂದು ಮಧ್ಯಾಹ್ನ ದರ್ಶನ್‌ರನ್ನು ಭೇಟಿಯಾದ ಬಳಿಕ, ಅವರ ಸೂಚನೆಯಂತೆ ಪವಿತ್ರಾ ಗೌಡ ಅವರ ನಿವಾಸದ ಕಡೆಗೆ ಕಾರಿನಲ್ಲಿ ತೆರಳಿದ್ದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

ನಂತರ ದರ್ಶನ್ ಹಾಗೂ ಪವಿತ್ರಾ ಗೌಡ ಒಂದೇ ಕಾರಿನಲ್ಲಿ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದರು ಎನ್ನಲಾಗಿದೆ. ಶೆಡ್‌ಗೆ ಪ್ರವೇಶಿಸಿದಾಗ ಸುಮಾರು 30 ವರ್ಷದ ವ್ಯಕ್ತಿಯೊಬ್ಬ ತಲೆಬಾಗಿಸಿಕೊಂಡು ಕುಳಿತಿದ್ದುದನ್ನು ಕಂಡಿದ್ದಾಗಿ ಪ್ರದೂಷ್ ಹೇಳಿದ್ದಾನೆ. ಅಲ್ಲಿ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಸೇರಿದಂತೆ ಇತರರು ಇದ್ದರು ಎಂದು ಅರ್ಜಿಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಚಪ್ಪಲಿಯಿಂದ ಹೊಡೆಸಿದ ಆರೋಪ

ಪ್ರದೂಷ್ ಹೇಳಿಕೆಯ ಪ್ರಕಾರ, ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳು ಹಾಗೂ ಖಾಸಗಿ ಅಂಗಗಳ ಫೋಟೋಗಳನ್ನು ಕಳುಹಿಸಿದ್ದಾನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಪವಿತ್ರಾ ಗೌಡರಿಂದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಲಾಗಿತ್ತು ಹಾಗೂ ದರ್ಶನ್ ನೈಲಾನ್ ಹಗ್ಗದಿಂದ ಆತನಿಗೆ ಹಲವು ಬಾರಿ ಹೊಡೆದಿದ್ದರು ಎಂದು ಪ್ರದೂಷ್ ಆರೋಪಿಸಿದ್ದಾನೆ. ಈ ವೇಳೆ ಪವನ್ ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಓದುತ್ತಿದ್ದ ಎಂದು ಹೇಳಿದ್ದಾನೆ.

ಜನನಾಂಗಕ್ಕೆ ಒದ್ದು, ಎದೆ ಮೇಲೆ ಕಾಲಿಟ್ಟಿದ್ದರೆಂದು ಆರೋಪ

ಅರ್ಜಿಯಲ್ಲಿ ಮಾಡಿರುವ ಅತ್ಯಂತ ಗಂಭೀರ ಆರೋಪವೆಂದರೆ, ರೇಣುಕಾಸ್ವಾಮಿಯ ಒಳಉಡುಪು ತೆಗೆಸಿದ ಬಳಿಕ ದರ್ಶನ್ ಆತನ ಖಾಸಗಿ ಅಂಗಕ್ಕೆ ಹಲವು ಬಾರಿ ಒದ್ದಿದ್ದರು ಎನ್ನುವುದು. ಅಲ್ಲದೆ, ಎರಡೂ ಕಾಲುಗಳನ್ನು ರೇಣುಕಾಸ್ವಾಮಿಯ ಎದೆ ಮೇಲೆ ಇಟ್ಟು ತುಳಿದಿದ್ದರು ಎಂದು ಪ್ರದೂಷ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

ಸಂಜೆ ಸುಮಾರು 5.30ರ ವೇಳೆಗೆ ದರ್ಶನ್ ಮತ್ತು ವಿನಯ್ ಅಲ್ಲಿಂದ ತೆರಳಿದ್ದರು. ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಸೇರಿದಂತೆ ಕೆಲವರು ಸ್ಥಳದಲ್ಲೇ ಉಳಿದಿದ್ದರು ಎಂದು ಪ್ರದೂಷ್ ಹೇಳಿರುವುದಾಗಿ ವರದಿಯಾಗಿದೆ.

ಸಾವು ವಿಚಾರ ತಿಳಿಸಿದ ಬಳಿಕ ದರ್ಶನ್ ಆತಂಕಗೊಂಡಿದ್ದರಂತೆ

ನಂತರ ರೇಣುಕಾಸ್ವಾಮಿ ಮೃತಪಟ್ಟಿರುವ ವಿಚಾರವನ್ನು ದರ್ಶನ್‌ಗೆ ತಿಳಿಸಿದ್ದಾಗಿ ಪ್ರದೂಷ್ ಹೇಳಿದ್ದಾನೆ. ಈ ವಿಚಾರ ತಿಳಿದು ದರ್ಶನ್ ಆಘಾತಕ್ಕೊಳಗಾಗಿದ್ದರು ಹಾಗೂ ತಮ್ಮ ಬಳಿ ಇದ್ದ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ಹೇಳಲಾಗಿದೆ.

ಅಂದು ದರ್ಶನ್‌ಗೆ ತಾನು ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿರುವ ಪ್ರದೂಷ್, ಇದೀಗ ನಡೆದ ಘಟನೆಯ ಬಗ್ಗೆ ಪಶ್ಚಾತ್ತಾಪಗೊಂಡಿರುವ ಕಾರಣ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪ್ರದೂಷ್ ಅರ್ಜಿಯಲ್ಲಿನ ಈ ಆರೋಪಗಳು ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಅರ್ಜಿಯಲ್ಲಿ ಮಾಡಿರುವ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಿದ್ದು, ಅವುಗಳನ್ನು ಆರೋಪಗಳಾಗಿಯೇ ಪರಿಗಣಿಸಬೇಕಾಗಿದೆ.

Related News

error: Content is protected !!