ಕೂಡ್ಲಿಗಿ (ವಿಜಯನಗರ): 2019ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿದ್ದ ಪರಿಹಾರವನ್ನು ಹಲವು ವರ್ಷಗಳಾದರೂ ಪಾವತಿಸದ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಕೊಪ್ಪಳ ಡಿಪೋಗೆ ಸೇರಿದ ಬಸ್ ಅನ್ನು ಜಪ್ತಿ ಮಾಡುವಂತೆ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ.

2019ರ ನವೆಂಬರ್ 10ರಂದು ತಾಲೂಕಿನ ಕ್ಯಾಸನಕೇರಿ ಗ್ರಾಮದ ನಾಗಪ್ಪ (55) ಅವರು ಟಾಟಾ ಏಸ್ ವಾಹನದಲ್ಲಿ ಹೊಸಪೇಟೆಯಿಂದ ಕೂಡ್ಲಿಗಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಶಿವಪುರ ಗ್ರಾಮದ ಸಮೀಪ ಎದುರಿನಿಂದ ಬಂದ ಕೊಪ್ಪಳ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ನಾಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಸಂಬಂಧ ಮೃತರ ಪತ್ನಿ ಕೊಟ್ರಮ್ಮ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ವಕೀಲ ಜಿ. ಸೀತಾರಾಮಗೌಡ ಅವರ ಮೂಲಕ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ 2020ರ ಅಕ್ಟೋಬರ್ 16ರಂದು ನ್ಯಾಯಾಲಯವು ಮೃತ ನಾಗಪ್ಪ ಅವರ ಕುಟುಂಬಕ್ಕೆ ₹12 ಲಕ್ಷ ಪರಿಹಾರವನ್ನು ಕೆಎಸ್‌ಆರ್‌ಟಿಸಿ ಕೊಪ್ಪಳ ಡಿಪೋ ಪಾವತಿಸಬೇಕೆಂದು ಆದೇಶಿಸಿತ್ತು. ಆದರೆ ಆದೇಶ ಹೊರಬಿದ್ದ ಹಲವು ವರ್ಷಗಳಾದರೂ ಪರಿಹಾರ ಹಣವನ್ನು ನೀಡದ ಕಾರಣ, ಸಂತ್ರಸ್ತರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ವಿಷಯವನ್ನು ತಂದಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ. ಯೋಗೇಶ್ ಅವರು ಕೆಎಸ್‌ಆರ್‌ಟಿಸಿ ಬಸ್ ಜಪ್ತಿಗೆ ಆದೇಶ ಹೊರಡಿಸಿದರು. ಅದರಂತೆ ಜುಲೈ 17ರಂದು ಕೊಪ್ಪಳ ಡಿಪೋಗೆ ಸೇರಿದ ಬಸ್ ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಬಂದ ತಕ್ಷಣ, ನ್ಯಾಯಾಲಯದ ಅಮೀನ್ ಸಿಬ್ಬಂದಿ ಹಾಗೂ ಸಂತ್ರಸ್ತರ ಪರ ವಕೀಲರ ಸಮ್ಮುಖದಲ್ಲಿ ಬಸ್ ಅನ್ನು ಕಾನೂನುಬದ್ಧವಾಗಿ ಜಪ್ತಿ ಮಾಡಿ ನ್ಯಾಯಾಲಯದ ಆವರಣಕ್ಕೆ ಕೊಂಡೊಯ್ಯಲಾಯಿತು.

ಜಪ್ತಿ ಕಾರ್ಯಾಚರಣೆಯಲ್ಲಿ ವಕೀಲರಾದ ಜಿ. ಸೀತಾರಾಮಗೌಡ, ಜಿ.ಎಂ. ಮಲ್ಲಿಕಾರ್ಜುನಯ್ಯ, ನ್ಯಾಯಾಲಯದ ಅಮೀನ್ ಸಿಬ್ಬಂದಿ ಕೊಟ್ರೇಶ್, ನಾಗರಾಜ್, ಶೇಖ್ ಅಬೂಬಕರ್ ಹಾಗೂ ಮೃತ ನಾಗಪ್ಪ ಅವರ ಪತ್ನಿ ಕೊಟ್ರಮ್ಮ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ನ್ಯಾಯಾಲಯದ ಆದೇಶಗಳನ್ನು ಸರ್ಕಾರಿ ಸಂಸ್ಥೆಗಳು ಕೂಡ ಕಡ್ಡಾಯವಾಗಿ ಪಾಲಿಸಬೇಕೆಂಬ ಸಂದೇಶವನ್ನು ಈ ಕ್ರಮ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Related News

error: Content is protected !!