
ಭುವನೇಶ್ವರ: ಪತ್ನಿಯ ಹುಟ್ಟುಹಬ್ಬದಂದು ಆಕೆಗೆ ಸರ್ಪ್ರೈಸ್ ನೀಡಲು ಸಂತಸದಿಂದ ಮನೆಗೆ ಬಂದಿದ್ದ ಇಂಜಿನಿಯರ್ ಒಬ್ಬರು ಕೆಲವೇ ಗಂಟೆಗಳಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಒಡಿಶಾದಲ್ಲಿ ಸಂಚಲನ ಮೂಡಿಸಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಕಾರಣ, ಆಕೆ ತನ್ನ ಸಹೋದ್ಯೋಗಿ ಪ್ರೇಮಿಯೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮೃತರನ್ನು ಭುವನೇಶ್ವರದ ಇಂಜಿನಿಯರ್ ರಶ್ಮಿ ರಂಜನ್ ಸೇಠಿ ಎಂದು ಗುರುತಿಸಲಾಗಿದೆ. ಅವರ ಪತ್ನಿ ರಶ್ಮಿರೇಖಾ ಭೂಯಾನ್ ಕೂಡ ಇಂಜಿನಿಯರ್ ಆಗಿದ್ದು, ಸಹೋದ್ಯೋಗಿ ದೇಬಾಶಿಶ್ ಸ್ವೈನ್ ಜೊತೆ ಆಪ್ತ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ.

ಕುಟುಂಬದವರ ಮಾಹಿತಿ ಹಾಗೂ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದ ಬಳಿಕ ರಶ್ಮಿ ರಂಜನ್ ಹಲವು ಬಾರಿ ವಿರೋಧ ವ್ಯಕ್ತಪಡಿಸಿ ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದರು. ಇದರಿಂದ ದಂಪತಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.
ಜುಲೈ 16ರಂದು ರಶ್ಮಿರೇಖಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿಗೆ ಸರ್ಪ್ರೈಸ್ ನೀಡಲು ರಶ್ಮಿ ರಂಜನ್ ಮನೆಗೆ ಆಗಮಿಸಿದ್ದರು. ಆದರೆ ಸಂಭ್ರಮದ ದಿನವೇ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರ ಕುಟುಂಬಸ್ಥರ ಆರೋಪದಂತೆ, ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದ ಕಾರಣ ರಶ್ಮಿರೇಖಾ ಮತ್ತು ಆಕೆಯ ಸಹೋದ್ಯೋಗಿ ದೇಬಾಶಿಶ್ ಸೇರಿ ಸಂಚು ರೂಪಿಸಿ ಕೊಲೆ ಎಸಗಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದು ಬಿಟ್ಟು, ಅಲ್ಲಿಂದ ಇಬ್ಬರೂ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪ್ರಕರಣದ ನಿಖರ ಕಾರಣ ಮತ್ತು ಸತ್ಯಾಂಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






