ತುಮಕೂರು: ಪ್ರೇಮಿಗಳ ನಡುವಿನ ಮನಸ್ತಾಪ ಭೀಕರ ತಿರುವು ಪಡೆದುಕೊಂಡ ಪರಿಣಾಮ, ಯುವಕನೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ನಾಗೇಂದ್ರ ಸಜೀವ ದಹನಗೊಂಡು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಯುವತಿ ರಮ್ಯಾಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗೇಂದ್ರ ಮತ್ತು ರಮ್ಯಾ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಇಬ್ಬರ ನಡುವೆ ಗಂಭೀರ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಬೇಸತ್ತಿದ್ದ ರಮ್ಯಾ ನಾಗೇಂದ್ರನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಳು. ಜಯನಗರದ ಒಂದನೇ ಬ್ಲಾಕ್‌ನಲ್ಲಿ ವಾಸವಾಗಿದ್ದ ರಮ್ಯಾ, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು.

ರಮ್ಯಾ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಅನುಮಾನದಿಂದ ಕೋಪಗೊಂಡಿದ್ದ ನಾಗೇಂದ್ರ, ಶನಿವಾರ ಮುಂಜಾನೆ ಆಕೆಯ ವಸತಿಗೃಹಕ್ಕೆ ತೆರಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ರಮ್ಯಾಳ ಸ್ನೇಹಿತೆಯಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ರಮ್ಯಾಳನ್ನು ಹೆದರಿಸಿ ಬಾಡಿಗೆಗೆ ಪಡೆದಿದ್ದ ಕಾರಿನಲ್ಲಿ ಬೆಂಗಳೂರಿನಿಂದ ಅಂಕೋಲಾಕ್ಕೆ ಕರೆದುಕೊಂಡು ಹೊರಟಿದ್ದಾನೆ. ಕಾರಿನಲ್ಲೇ ಮೊದಲೇ ಪೆಟ್ರೋಲ್ ಬಾಂಬ್ ಇಟ್ಟುಕೊಂಡಿದ್ದ ನಾಗೇಂದ್ರ, ಪ್ರಯಾಣದ ವೇಳೆ ನಿರಂತರವಾಗಿ ಜಗಳವಾಡುತ್ತಾ “ನಿನ್ನನ್ನೂ ಕೊಂದು ನಾನು ಸಾಯುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಶಿರಾ ಸಮೀಪದ ಜೋಗಿಹಳ್ಳಿ ಬಳಿ ಕಾರು ತಲುಪುತ್ತಿದ್ದಂತೆ ನಾಗೇಂದ್ರ ಏಕಾಏಕಿ ರಮ್ಯಾಳ ತಲೆ ಮತ್ತು ಕೈಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಸಮಯಪ್ರಜ್ಞೆ ತೋರಿದ ರಮ್ಯಾ, ಚಲಿಸುತ್ತಿದ್ದ ಕಾರಿನ ಲಾಕ್ ತೆರೆಯಿಸಿ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಯುವತಿ ಕಾರಿನಿಂದ ಹೊರಬಿದ್ದ ತಕ್ಷಣ ನಾಗೇಂದ್ರ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡಿದ್ದಾನೆ. ಪರಿಣಾಮ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!