
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಕಂಪನಿ ಕಚೇರಿ ಸೇರಿದಂತೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವಿವಿಧೆಡೆಗಳಲ್ಲಿ ಸುಮಾರು 16 ಸ್ಥಳಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಲಾಗಿದೆ.
ಕದ್ದ ಚಿನ್ನಾಭರಣಗಳನ್ನು ಖರೀದಿಸಿ ಅಕ್ರಮವಾಗಿ ವಹಿವಾಟು ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳು ಹಾಗೂ ಚಾರ್ಜ್ಶೀಟ್ಗಳ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ದಾಳಿ ವೇಳೆ ಏನೇನು ಪತ್ತೆ?
ಇಡಿ ಅಧಿಕಾರಿಗಳ ಶೋಧ ಕಾರ್ಯದ ವೇಳೆ ಅಟ್ಟಿಕಾ ಬಾಬು ಅವರಿಗೆ ಸೇರಿದ ಮನೆಯಲ್ಲಿ ವಿದೇಶಿ ಕರೆನ್ಸಿ, ಚಿನ್ನ, ಬೆಳ್ಳಿ ಹಾಗೂ ₹7.52 ಲಕ್ಷ ನಗದು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು, ಚೆನ್ನೈ, ವಿಶಾಖಪಟ್ಟಣಂ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಚಿನ್ನದ ಖರೀದಿ ಮತ್ತು ಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಗ್ರಾಹಕರ ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಷೇರುದಾರರ ಸ್ಥಳಗಳಲ್ಲೂ ಶೋಧ
ಇಡಿ ತನಿಖೆಗೆ ಸಹಕರಿಸದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಅಟ್ಟಿಕಾ ಗೋಲ್ಡ್ ಕಂಪನಿಯ ಷೇರುದಾರರಾದ ಅಯೂಬ್ ಬಾಬು, ಒಬೆದುಲ್ಲಾ, ಮಹಮದ್ ಸಲ್ಮಾನ್ ಹಾಗೂ ಅರ್ಬಿನ್ ತಾಜ್ ಅವರಿಗೆ ಸೇರಿದ ಸ್ಥಳಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಶೋಧದ ವೇಳೆ ಅಕ್ರಮ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕಂಪನಿಯ ಮಾಲೀಕರು ಹಾಗೂ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ.
‘ನಾನು ಅಟ್ಟಿಕಾ ಗೋಲ್ಡ್ ಓನರ್ ಅಲ್ಲ, ಷೇರುದಾರ ಮಾತ್ರ’
ಇಡಿ ದಾಳಿ ಕುರಿತು ಅಟ್ಟಿಕಾ ಬಾಬು ಪ್ರತಿಕ್ರಿಯಿಸಿದ್ದು, ತಾವು ಕಂಪನಿಯ ಮಾಲೀಕರಲ್ಲ, ಕೇವಲ ಷೇರುದಾರ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾನು ಸದ್ಯ ಹಿರಿಯೂರಿನಲ್ಲಿದ್ದೇನೆ. ಮಾದರ ಚೆನ್ನಯ್ಯ ಮಠಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಂದಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ನನ್ನ ಮನೆ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಇಡಿ ದಾಳಿ ಸರ್ಕಾರದ ತನಿಖಾ ಪ್ರಕ್ರಿಯೆಯ ಒಂದು ಭಾಗ. ಅಧಿಕಾರಿಗಳು ಪರಿಶೀಲನೆ ಹಾಗೂ ತನಿಖೆ ನಡೆಸುತ್ತಾರೆ. ನಾನು ಅಟ್ಟಿಕಾ ಗೋಲ್ಡ್ನ ಓನರ್ ಅಲ್ಲ, ಷೇರುದಾರ ಮಾತ್ರ. ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದು, ನಾನು, ನನ್ನ ಪತ್ನಿ ಹಾಗೂ ಮಗಳು ಷೇರುದಾರರಾಗಿದ್ದೇವೆ. ಕಂಪನಿಯ ನಿರ್ದೇಶಕರು ಈ ಕುರಿತು ಮಾತನಾಡಬೇಕೇ ಹೊರತು, ಷೇರುದಾರರು ಮಾತನಾಡುವುದಿಲ್ಲ’ ಎಂದು ಅಟ್ಟಿಕಾ ಬಾಬು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಮುಂದುವರಿದಿದ್ದು, ಶೋಧದ ವೇಳೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಇತರೆ ವಸ್ತುಗಳ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.






