ಭಟ್ಕಳ: ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳದ ಬಂದರ ರಸ್ತೆ ಭಾಗದಲ್ಲಿ ನಡೆದಿದೆ.
ಮೃತರನ್ನು ಸಬ್ಬತ್ತಿ ನಿವಾಸಿ ಮಧುರ ಮಂಜುನಾಥ ನಾಯ್ಕ (24) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬೈಕ್ ಸವಾರ ಸುಮೇದ ನಾರಾಯಣ ನಾಯ್ಕ (ಗರಡಿಹಿತ್ಲು–ಬೆಳಕೆ ನಿವಾಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 26ರಂದು ರಾತ್ರಿ ಸುಮಾರಿಗೆ ಸುಮೇದ ನಾಯ್ಕ ಅವರು ಟಿವಿಎಸ್ ಅಪಾಚೆ ಬೈಕ್ನಲ್ಲಿ ಮಧುರ ನಾಯ್ಕರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸಂಶುದ್ದೀನ್ ಸರ್ಕಲ್ನಿಂದ ಬಂದರ ರಸ್ತೆಯತ್ತ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಮಧುರ ನಾಯ್ಕ ಅವರಿಗೆ ಎದೆ, ಸೊಂಟ ಹಾಗೂ ಕೈ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸವಾರ ಸುಮೇದ ನಾಯ್ಕ ಅವರಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ಥಳೀಯರು ಆಸ್ಪತ್ರೆಗೆ ಆಗಮಿಸಿ ಸಂತಾಪ ಸೂಚಿಸಿದರು.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
