ಧಾರವಾಡ: ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪತಿಗೆ ಧಾರವಾಡದ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಆರೋಪಿ ಶಿವಾನಂದ (37) ತನ್ನ ಪತ್ನಿ ಮಲ್ಲವ್ವಳ ನಡತೆಯ ಬಗ್ಗೆ ನಿರಂತರವಾಗಿ ಸಂಶಯ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದಂಪತಿಯ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು ಎಂದು ತಿಳಿದುಬಂದಿದೆ.
2024ರ ಏಪ್ರಿಲ್ 27ರ ತಡರಾತ್ರಿ, ಮನೆಯಲ್ಲಿ ಮಲಗಿದ್ದ ಪತ್ನಿ ಮಲ್ಲವ್ವಳ ಮೇಲೆ ಶಿವಾನಂದ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು. ಘಟನೆ ವೇಳೆ ಪಕ್ಕದಲ್ಲೇ ಮಲಗಿದ್ದ ಇಬ್ಬರು ಅಪ್ರಾಪ್ತ ಮಕ್ಕಳು ಈ ಭೀಕರ ದೃಶ್ಯವನ್ನು ಕಣ್ಣಾರೆ ಕಂಡಿದ್ದರು.
ಪ್ರಕರಣದ ತನಿಖೆ ನಡೆಸಿದ ನವಲಗುಂದ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಸ್. ಕಪ್ಪತ್ತನವರ್ ಅವರು ನ್ಯಾಯಾಲಯಕ್ಕೆ ಪ್ರಮುಖ ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ವಿಶೇಷವಾಗಿ, ಮಕ್ಕಳ ಕಣ್ಣಾರೆ ಕಂಡ ಸಾಕ್ಷ್ಯ ಈ ಪ್ರಕರಣದಲ್ಲಿ ನಿರ್ಣಾಯಕವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪೂರ್ಣಿಮಾ ಎನ್. ಪೈ ಅವರು ಆರೋಪಿಯ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಅದರೊಂದಿಗೆ, ದಂಡದ ಮೊತ್ತದಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥರಾದ ಇಬ್ಬರು ಮಕ್ಕಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಮಾನವೀಯ ಆದೇಶ ಹೊರಡಿಸಿದೆ.
