ಮದುವೆಯಾಗಿ ಕೇವಲ 48 ದಿನಗಳಲ್ಲೇ 26 ವರ್ಷದ ನವವಧು ವಿಶಾಖಾ ತಿಲ್ಕರ್ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಂಬೈ ಸಮೀಪದ ಅಂಬರ್‌ನಾಥ್‌ನಲ್ಲಿ ನಡೆದಿದೆ. ವರದಕ್ಷಿಣೆ ವಿಚಾರವಾಗಿ ಪತಿ ಹಾಗೂ ಅತ್ತೆ ಮನೆಯವರಿಂದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಮೃತೆಯ ಕುಟುಂಬ ಆರೋಪಿಸಿದೆ.
ಈ ಪ್ರಕರಣ ಸಂಬಂಧ ವಿಶಾಖಾ ಅವರ ಪತಿ, ವೈದ್ಯ ಡಾ. ನಿತಿನ್ ತಿಲ್ಕರ್ ಅವರನ್ನು ಪೊಲೀಸರು ಬಂಧಿಸಿದ್ದು, ಅತ್ತೆ ಛಾಯಾ ಹಾಗೂ ಸೋದರ ನಿನಾದ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವಿಶಾಖಾ ಮತ್ತು ನಿತಿನ್ ಅವರ ವಿವಾಹ ಕಳೆದ ಏಪ್ರಿಲ್ 30ರಂದು ನಡೆದಿತ್ತು. ಮದುವೆಗೆ ಮುನ್ನ ಎಲ್ಲವೂ ಸುಗಮವಾಗಿದ್ದರೂ, ಮದುವೆಯಾದ ಬಳಿಕ ವರದಕ್ಷಿಣೆ ವಿಚಾರವಾಗಿ ಕಿರುಕುಳ ಆರಂಭವಾಯಿತು ಎಂದು ಕುಟುಂಬಸ್ಥರು ದೂರಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಉಡುಗೊರೆ ಹಾಗೂ ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಹಣ ಮತ್ತು ಚಿನ್ನ ತರಲು ವಿಶಾಖಾ ಮೇಲೆ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ.
ಕುಟುಂಬಸ್ಥರ ಆರೋಪದಂತೆ, ವಿಶಾಖಾ ಅವರ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡಲು ಪತಿ ಮನೆಯೊಳಗೆ ಹಾಗೂ ಹೊರಭಾಗದಲ್ಲಿ ಹಲವು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಯಾರೊಂದಿಗಾದರೂ ಮಾತನಾಡಿದರೂ ಆಕೆಗೆ ಹಲ್ಲೆ ನಡೆಸಲಾಗುತ್ತಿತ್ತು. ಆತ್ಮಹತ್ಯೆಗೆ ಎರಡು ದಿನಗಳ ಮೊದಲು ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ್ದ ಕಾರಣಕ್ಕೂ ಪತಿ ಹಲ್ಲೆ ನಡೆಸಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಿಶಾಖಾ ತನ್ನ ತಾಯಿಗೆ ಕರೆ ಮಾಡಿ ತಾನು ಅನುಭವಿಸುತ್ತಿದ್ದ ಹಿಂಸೆಯ ಬಗ್ಗೆ ಕಣ್ಣೀರಿಟ್ಟು ಹೇಳಿಕೊಂಡಿದ್ದಳು. ಮಗಳನ್ನು ಮನೆಗೆ ಕರೆತರಲು ಪೋಷಕರು ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲೇ, ವಿಶಾಖಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಲುಪಿದೆ.
ಕುಟುಂಬದ ದೂರಿನ ಮೇರೆಗೆ ಅಂಬರ್‌ನಾಥ್ ಶಿವಾಜಿನಗರ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
