ಮಂಡ್ಯ: ಆಟವಾಡುತ್ತಿದ್ದ ವೇಳೆ ಮನೆಯ ಮುಂದಿನ ನೀರಿನ ಸಂಪ್ಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ನಡೆದಿದೆ.
ಹರೀಶ್ ಹಾಗೂ ಸುಷ್ಮಾ ದಂಪತಿಯ ಪುತ್ರ ವಿನು (02) ಮೃತಪಟ್ಟ ಮಗು ಎಂದು ತಿಳಿದುಬಂದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನ ಸಂಪ್ಗೆ ಬಿದ್ದಿದ್ದು, ಕೆಲ ಸಮಯದ ಬಳಿಕ ಮಗುವನ್ನು ಹೊರತೆಗೆದರೂ ಅದು ಮೃತಪಟ್ಟಿತ್ತು ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬದಲ್ಲಿ ಆಕ್ರಂದನ ಮೇಳೈಸಿದ್ದು, ಮಗುವಿನ ಸಾವಿನಿಂದ ಪೋಷಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಗ್ರಾಮದಲ್ಲಿಯೂ ದುಃಖದ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
