ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಕುಟುಂಬಗಳನ್ನು ಬೆಚ್ಚಿಬೀಳಿಸುವ ಘಟನೆೊಂದು ಬೆಳಕಿಗೆ ಬಂದಿದೆ. ಸ್ನೇಹದ ಹೆಸರಿನಲ್ಲಿ ಮನೆಗೆ ಆಗಾಗ್ಗೆ ಬರುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿರುವ ಪ್ರಕರಣ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಪರಾರಿಯಾದವರನ್ನು ಪವಿತ್ರ ಮತ್ತು ಯೇಸುದಾಸ್ ಎಂದು ಗುರುತಿಸಲಾಗಿದೆ. ಇಬ್ಬರೂ ಈಗಾಗಲೇ ವಿವಾಹಿತರಾಗಿದ್ದು, ತಲಾ ಇಬ್ಬರು ಮಕ್ಕಳಿದ್ದಾರೆ ಎಂಬುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆಯನ್ನು ತಂದಿದೆ. ತಮ್ಮ ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಬಿಟ್ಟು ಇಬ್ಬರೂ ಮನೆ ತೊರೆದಿರುವುದು ಕುಟುಂಬಸ್ಥರಿಗೆ ಭಾರೀ ಆಘಾತ ಉಂಟುಮಾಡಿದೆ.
ಮನೆ ಬಿಟ್ಟು ಹೋದ ನಂತರ ಪವಿತ್ರ ಮತ್ತು ಯೇಸುದಾಸ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಬಳಿಕ ತಮ್ಮ ಮದುವೆ ಫೋಟೋಗಳನ್ನು ಕುಟುಂಬಸ್ಥರ ಮೊಬೈಲ್‌ಗಳಿಗೆ ಕಳುಹಿಸಿ ಮತ್ತಷ್ಟು ಶಾಕ್ ನೀಡಿದ್ದಾರೆ. ಈ ಬೆಳವಣಿಗೆಯಿಂದ ಎರಡೂ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಮನೆಯವರು ಕಂಗಾಲಾಗಿದ್ದಾರೆ.
ಒಂದೆಡೆ ಪತ್ನಿಯನ್ನು ಕಳೆದುಕೊಂಡ ಗಂಡ, ಮತ್ತೊಂದೆಡೆ ಗಂಡನಿಂದ ದೂರವಾದ ಹೆಂಡತಿ ತಮ್ಮ ಮಕ್ಕಳೊಂದಿಗೆ ದುಃಖದಲ್ಲಿದ್ದಾರೆ. ಮಕ್ಕಳ ಭವಿಷ್ಯವನ್ನು ನೆನೆದು ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಮಕ್ಕಳ ಮುಖ ನೋಡಿದರೂ ಮರಳಿ ಮನೆಗೆ ಬನ್ನಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
