ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರ ಪ್ರಸ್ತಾಪಿಸಿರುವ ಬೇಡ್ತಿ–ಗಂಗಾವಳಿ ನದಿ ತಿರುವು ಯೋಜನೆ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಯನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಯೋಜನೆಗಳಿಂದ ಜಿಲ್ಲೆಯ ಪರಿಸರ ಸಮತೋಲನಕ್ಕೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ವಿಶೇಷವಾಗಿ ಶಿರಸಿ ತಾಲೂಕಿನ ಪಟ್ಟಣದಹೊಳೆ, ಶಾಲ್ಮಲಾ ನದಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಯೋಜನೆ ಜಾರಿಯಾದಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗುವ ಜೊತೆಗೆ ಅಪರೂಪದ ಜೀವ ವೈವಿಧ್ಯತೆ ಮತ್ತು ನದಿ ತೀರದ ಅರಣ್ಯ ಸಂಪತ್ತು ಹಾನಿಗೊಳಗಾಗಲಿದೆ. ಇದರಿಂದ ರೈತರು, ಮೀನುಗಾರರು ಹಾಗೂ ಅರಣ್ಯಾಧಾರಿತ ಜೀವನ ನಡೆಸುತ್ತಿರುವ ವನವಾಸಿಗಳ ಜೀವನೋಪಾಯಕ್ಕೂ ದೊಡ್ಡ ಹೊಡೆತ ಬೀಳಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬೇಡ್ತಿ ನದಿ ತಿರುವು ಯೋಜನೆಯಿಂದ ಶಿರಸಿ ಮತ್ತು ಯಲ್ಲಾಪುರ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವುದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆಗೆ ನದಿ ತಿರುವು ಯೋಜನೆಗಳೇ ಪರಿಹಾರವಲ್ಲ. ಬದಲಾಗಿ ಮಳೆನೀರು ಸಂಗ್ರಹಣೆ, ಸ್ಥಳೀಯ ಕೆರೆಗಳ ಪುನರುಜ್ಜೀವನ ಹಾಗೂ ಜಲಸಂರಕ್ಷಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸಮಸ್ಯೆ ಪರಿಹರಿಸಬಹುದು ಎಂದು ಮನವಿದಾರರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯ ಪ್ರತಿಯನ್ನು ಜಲಸಂಪನ್ಮೂಲ ಇಲಾಖೆ, ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಉಪ ವಿಭಾಗಾಧಿಕಾರಿಗಳಿಗೂ ಕಳುಹಿಸಲಾಗಿದೆ. ಪರಿಸರ ಮತ್ತು ಜನಜೀವನದ ಹಿತದೃಷ್ಟಿಯಿಂದ ಈ ಯೋಜನೆಗಳನ್ನು ಸರ್ಕಾರ ಮರುಪರಿಶೀಲಿಸಿ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Related News

error: Content is protected !!