ದಾಂಡೇಲಿ: ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿ ಬಾಬು ತಂದೆ ರಾಮಪ್ಪ ದೊಡ್ಡಮನಿ (41) ಅವರನ್ನು ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಬರ್ಚಿ ರಸ್ತೆ, ಜನತಾ ವಿದ್ಯಾಲಯ ಸಮೀಪದ ನಿವಾಸಿಯಾಗಿರುವ ಬಾಬು ದೊಡ್ಡಮನಿ ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ 2012ರಿಂದ 2025ರವರೆಗೆ ಒಟ್ಟು 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರ ವಿರುದ್ಧ ಕೊ. ಲೆ ಯತ್ನ, ದೊಂಬಿ, ಜೂಜಾಟ, ಲೈಂಗಿಕ ದೌರ್ಜನ್ಯ, ಹಲ್ಲೆ ಹಾಗೂ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ರೌಡಿ ಶಿಟರ್ ತೆರೆಯಲಾಗಿತ್ತು.
ಆದರೆ, ಪೊಲೀಸ್ ನಿಗಾದ ನಡುವೆಯೂ ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದರಿಂದ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯವರು ಗಡಿಪಾರು ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಬಾಬು ದೊಡ್ಡಮನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ, ಬೀದರ ಜಿಲ್ಲೆಯ ಬೀದರ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವಂತೆ ಆದೇಶಿಸಿದ್ದಾರೆ.
ಆದೇಶದಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಬು ದೊಡ್ಡಮನಿ ಅವರನ್ನು ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆಯ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.
