ಬಾಗಲಕೋಟೆ ನಗರದಲ್ಲಿ ಸರ್ಕಾರಿ ಕಚೇರಿಗಳ ಕಾರ್ಯವೈಖರಿ ಹಾಗೂ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕರ ಅಸಮಾಧಾನ ಮತ್ತೊಮ್ಮೆ ಹೊರಹೊಮ್ಮಿದೆ. ಬಿಟಿಡಿಎ (BTDA) ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಸಂತ್ರಸ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಚರ್ಚೆಗೆ ಗ್ರಾಸವಾಗಿದೆ.
ಸ್ಥಳೀಯರ ಆರೋಪದ ಪ್ರಕಾರ, ಮಾಜಿ ಶಾಸಕ ದಿವಂಗತ ಹೆಚ್.ವೈ. ಮೇಟಿ ಅವರ ಅವಧಿಯಿಂದಲೂ ಹಲವು ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕಡತ ಮುಂದುವರಿಯಬೇಕಾದರೂ ಅಥವಾ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆಯಬೇಕಾದರೂ ಹೊಳಬಸು ಶೆಟ್ಟರ್ ಎಂಬ ಖಾಸಗಿ ವ್ಯಕ್ತಿಯ ಪ್ರಭಾವವಿದೆ ಎಂಬ ಮಾತು ಕೇಳಿಬರುತ್ತಿತ್ತು.
ಉಪಚುನಾವಣೆಯ ಬಳಿಕ ಉಮೇಶ್ ಮೇಟಿ ಅವರು ಶಾಸಕರಾಗಿ ಅಧಿಕಾರ ಸ್ವೀಕರಿಸಿದ್ದರೂ, ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪ ಕಡಿಮೆಯಾಗಿಲ್ಲ ಎಂಬ ಆರೋಪಗಳು ಈಗಲೂ ಕೇಳಿಬರುತ್ತಿವೆ. ಇದೇ ಹಿನ್ನೆಲೆದಲ್ಲಿ ನಿನ್ನೆ ನಡೆದ ಬಿಟಿಡಿಎ ಸಭೆಯಲ್ಲಿ ಸಂತ್ರಸ್ತರ ತಾಳ್ಮೆ ಮೀರಿದ್ದು, ಅಧ್ಯಕ್ಷರ ಸಮ್ಮುಖದಲ್ಲೇ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಇದ್ದರೂ, ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳ ಪ್ರಭಾವ ಏಕೆ ಮುಂದುವರಿಯುತ್ತಿದೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ತಮ್ಮ ಹಕ್ಕಿನ ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಬದ್ಧರಾಗಿರಬೇಕೇ ಹೊರತು ಯಾವುದೇ ಖಾಸಗಿ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗಬಾರದು” ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.
ಬಿಟಿಡಿಎ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪದ ಕುರಿತು ಶಾಸಕ ಉಮೇಶ್ ಮೇಟಿ ಅವರು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ವರದಿ: ಸಂಗಪ್ಪ ಚಲವಾದಿ
