ಹೈಕೋರ್ಟ್ ನಿರ್ದೇಶನದಂತೆ ನಡೆದ ಅಂಚೆ ಮತಗಳ ಮರುಎಣಿಕೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಮಹತ್ವದ ತಿರುವು ಕಂಡುಬಂದಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಭಾನುವಾರ ತಡರಾತ್ರಿ ಅಧಿಕೃತವಾಗಿ ಪ್ರಕಟಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಆರಂಭಿಕ ಫಲಿತಾಂಶ ಹೊರಬಂದಾಗ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ಅಂದಿನ ಜಿಲ್ಲಾಧಿಕಾರಿ ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧವೂ ದೂರು ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಅಂಚೆ ಮತಗಳನ್ನು ಮರುಎಣಿಸಲು ಆದೇಶ ನೀಡಿತ್ತು.
ಶನಿವಾರ ತಡರಾತ್ರಿವರೆಗೆ ನಡೆದ ಮರುಎಣಿಕೆಯಲ್ಲಿ ಫಲಿತಾಂಶ ಸಂಪೂರ್ಣವಾಗಿ ಬದಲಾಗಿದೆ. ಜೀವರಾಜ್ ಅವರಿಗೆ 2023ರಲ್ಲಿ ಲಭಿಸಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳ ಇಳಿಕೆಯಾಗಿದ್ದು, ಈಗ ಅವರ ಸಂಖ್ಯೆ 690ಕ್ಕೆ ತಲುಪಿದೆ.
ಇನ್ನೊಂದೆಡೆ, ರಾಜೇಗೌಡ ಅವರು ಮೊದಲು ಪಡೆದಿದ್ದ 569 ಅಂಚೆ ಮತಗಳಲ್ಲಿ 255 ಮತಗಳು ಅಮಾನ್ಯಗೊಂಡಿದ್ದು, ಅವರ ಮತಗಳ ಸಂಖ್ಯೆ 314ಕ್ಕೆ ಕುಸಿದಿದೆ. ಈ ಭಾರಿ ವ್ಯತ್ಯಾಸವೇ ಅಂತಿಮ ಫಲಿತಾಂಶವನ್ನು ಬದಲಿಸಿ, ಜೀವರಾಜ್ ಅವರಿಗೆ 52 ಮತಗಳ ಮುನ್ನಡೆ ಒದಗಿಸಿದೆ.
ಚುನಾವಣಾ ಆಯೋಗದ ಘೋಷಣೆಯ ಬಳಿಕ ಜೀವರಾಜ್ ಅವರು ಶೀಘ್ರದಲ್ಲೇ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇತ್ತ, ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಮತ್ತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ.
