ದಾವಣಗೆರೆ: ದರಖಾಸ್ತು ಜಮೀನಿನ ಪೋಡಿ ಸಂಬಂಧಿತ ತಾಂತ್ರಿಕ ವರದಿ ನೀಡಲು ₹50,000 ಲಂಚ ಸ್ವೀಕರಿಸುತ್ತಿದ್ದ ಚನ್ನಗಿರಿ ತಾಲ್ಲೂಕಿನ ಸರ್ವೆ ಸೂಪರ್‌ವೈಸರ್ ಕೆ.ಎಚ್. ಆಂಜನಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ನಗರದ ಹಳೆಯ ಬಸ್ ನಿಲ್ದಾಣದ ಸಮೀಪ ಶುಕ್ರವಾರ ರಾತ್ರಿ ನಡೆದ ದಾಳಿಯಲ್ಲಿ, ಆಂಜನಪ್ಪ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳು ಅವರನ್ನು ಬಂಧಿಸಿದರು. ನಂತರ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಚನ್ನಗಿರಿ ತಾಲ್ಲೂಕಿನ ಮಧುರ ನಾಯಕನಹಳ್ಳಿಯ ಸರ್ವೆ ನಂ. 46ರಲ್ಲಿ ಎ.ಬಿ. ಕುಮಾರ ನಾಯ್ಕ ಅವರು 4 ಎಕರೆ ದರಖಾಸ್ತು ಜಮೀನಿನ ಹದ್ದುಬಸ್ತಿಗೆ ಸಂಬಂಧಿಸಿದಂತೆ ಭೂದಾಖಲೆಗಳ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪೋಡಿ ರದ್ದು ಹಾಗೂ ದುರಸ್ತಿ ಕಾರ್ಯ ಪೂರ್ಣಗೊಳ್ಳದೇ ಅಳತೆ ಸಾಧ್ಯವಿಲ್ಲವೆಂದು ಸರ್ವೇಯರ್ ವರದಿ ನೀಡಿದ್ದನು. ಇದರಿಂದ ಅಸಮಾಧಾನಗೊಂಡ ಕುಮಾರ ನಾಯ್ಕ ಅವರು ಜಂಟಿ ನಿರ್ದೇಶಕರ ಕಚೇರಿಗೆ ಮೇಲ್ಮನವಿ ಸಲ್ಲಿಸಿದರು.

ಮೇಲ್ಮನವಿಯನ್ನು ಪರಿಶೀಲಿಸಿದ ಜಂಟಿ ನಿರ್ದೇಶಕರು ತಾಂತ್ರಿಕ ವರದಿ ಸಲ್ಲಿಸಲು ತಾಲ್ಲೂಕು ಸಹಾಯಕ ನಿರ್ದೇಶಕರಿಗೆ (ಎಡಿಎಲ್‌ಆರ್) ಸೂಚನೆ ನೀಡಿದರು. ಈ ಜವಾಬ್ದಾರಿಯನ್ನು ಸರ್ವೆ ಸೂಪರ್‌ವೈಸರ್ ಆಂಜನಪ್ಪ ಅವರಿಗೆ ನೀಡಲಾಗಿತ್ತು. ಏಪ್ರಿಲ್ 2ರಂದು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ್ದರು.

ಆದರೆ, ಅರ್ಜಿದಾರರ ಪರವಾಗಿ ವರದಿ ನೀಡಲು ಆಂಜನಪ್ಪ ₹1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದ ಕುಮಾರ ನಾಯ್ಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ರೂಪಿಸಲಾದ ಬಲೆಗೆ ಅನುಸಾರವಾಗಿ, ಆಂಜನಪ್ಪನ ಸ್ನೇಹಿತ ಶ್ರೀಧರ್ ಮುಖಾಂತರ ₹50,000 ನೀಡುವ ವೇಳೆ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದರು.

ಈ ಕಾರ್ಯಾಚರಣೆ ಕುರಿತು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪೂರೆ ಮಾಹಿತಿ ನೀಡಿದ್ದಾರೆ.

Related News

error: Content is protected !!