ಉತ್ತರ ಪ್ರದೇಶದ ಕೌಶಂಬಿಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ರೋಗಿಯ ಖಾಸಗಿತನ ಉಲ್ಲಂಘನೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ ವೇಳೆ ಯುವತಿಯೊಬ್ಬರ ಮುಖ ಹಾಗೂ ಖಾಸಗಿ ಭಾಗಗಳ ಫೋಟೋಗಳನ್ನು ತೆಗೆದು ವಾಟ್ಸಾಪ್ ಗುಂಪುಗಳಲ್ಲಿ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ಮೇಲೆ ತೀವ್ರ ತನಿಖೆ ನಡೆಯುತ್ತಿದೆ.

ಏಪ್ರಿಲ್ 26ರಂದು 22 ವರ್ಷದ ಯುವತಿ ಬಾರ್ಥೋಲಿನ್ ಸಿಸ್ಟ್ ಶಸ್ತ್ರಚಿಕಿತ್ಸೆಗೆ ಸ್ತ್ರೀರೋಗ ವಿಭಾಗದಲ್ಲಿ ದಾಖಲಾಗಿದ್ದರು. ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದ ಸಂದರ್ಭದಲ್ಲಿ, ಆಸ್ಪತ್ರೆ ಸಿಬ್ಬಂದಿಯೊಬ್ಬರು ಮೊಬೈಲ್‌ನಲ್ಲಿ ಆಕೆಯ ಅರೆನಗ್ನ ಫೋಟೋಗಳನ್ನು ಸೆರೆಹಿಡಿದಿರುವ ಆರೋಪವಿದೆ.

ಈ ಫೋಟೋಗಳನ್ನು ವೈದ್ಯರು, ಅಧಿಕಾರಿಗಳು ಹಾಗೂ ಮಾಧ್ಯಮದವರಿರುವ ವಾಟ್ಸಾಪ್ ಗುಂಪುಗಳಿಗೆ ಕಳುಹಿಸಲಾಗಿದ್ದು, ಬಳಿಕ ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದವು. ಇದರಿಂದ ಪ್ರಕರಣವು ಹೆಚ್ಚು ಗಂಭೀರ ಸ್ವರೂಪ ಪಡೆದಿದೆ.

ಈ ಕುರಿತು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಶ್ವಾಹ ದೂರು ನೀಡಿದ ಬೆನ್ನಲ್ಲೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಡಿಎಸ್‌ಪಿ ಶಿವಾಂಕ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಹರಿಓಂ ಕುಮಾರ್ ಸಿಂಗ್ ಈ ಘಟನೆ ದೊಡ್ಡ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಆಪರೇಷನ್ ಥಿಯೇಟರ್ ಒಳಗೆ ಮೊಬೈಲ್ ಕೊಂಡೊಯ್ದವರು ಯಾರು ಎಂಬುದನ್ನು ಪತ್ತೆಹಚ್ಚಲು ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ನೈತಿಕತೆ ಮತ್ತು ರೋಗಿಯ ಗೌಪ್ಯತೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಈ ಘಟನೆಯು ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಖಾಸಗಿತನದ ರಕ್ಷಣೆ ಮತ್ತು ಡಿಜಿಟಲ್ ಸಾಧನಗಳ ದುರ್ಬಳಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ತಪ್ಪಿತಸ್ಥರಿಗೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬೇಕೆಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related News

error: Content is protected !!