ಧಾರವಾಡ: ಗಾಂಜಾ ಪ್ರಕರಣದಲ್ಲಿ ಹೆಸರು ಸೇರಿಸಲಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮೃತ ವಿದ್ಯಾರ್ಥಿಯನ್ನು 20 ವರ್ಷದ ಆದಿತ್ಯ ಮ್ಯಾಗೇರಿ ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ನಿವಾಸಿಯಾಗಿದ್ದ ಆದಿತ್ಯ, ಧಾರವಾಡದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದನು.
ಮಾಹಿತಿ ಪ್ರಕಾರ, ಗಾಂಜಾ ವಿರುದ್ಧ ವಿಶೇಷ ದಾಳಿ ನಡೆಸಿದ ಪೊಲೀಸರು ಹಲವಾರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಅವರಲ್ಲಿಯೇ ಆದಿತ್ಯ ಕೂಡ ಇದ್ದನು. ಆತ ಗಾಂಜಾ ಸೇವನೆ ಮಾಡಿರಲಿಲ್ಲವಾದರೂ, ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರ ಬೆದರಿಕೆ ಎದುರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆದಿತ್ಯನನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಮತ್ತೆ ಪೊಲೀಸರು ಕರೆಸಿಕೊಳ್ಳಬಹುದು ಎಂಬ ಭಯದಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ. ಮನೆಗೆ ಹಿಂತಿರುಗಿದ ಬಳಿಕ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ದುರ್ಘಟನೆ ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
