ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಆರು ವಿದೇಶಿ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮಡಿವಾಳ ಚೆಕ್ ಪೋಸ್ಟ್ ಸಮೀಪದ ಬಸ್ ನಿಲ್ದಾಣದ ಫುಟ್‌ಪಾತ್ ಬಳಿ ನಿಂತುಕೊಂಡು ಕೆಲವು ವಿದೇಶಿ ಮಹಿಳೆಯರು ರಸ್ತೆ ಮೂಲಕ ಹಾದುಹೋಗುವ ಪುರುಷರನ್ನು ಅಕ್ರಮ ಚಟುವಟಿಕೆಗಳಿಗೆ ಆಹ್ವಾನಿಸುತ್ತಿದ್ದಾರೆ ಎಂಬ ಸುಳಿವು ದೊರಕಿತ್ತು. ಈ ಮಾಹಿತಿ ಆಧಾರವಾಗಿ ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಮಹಿಳಾ ರಕ್ಷಣಾ ವಿಭಾಗದ ಅಧಿಕಾರಿಗಳು ಏಪ್ರಿಲ್ 24ರಂದು ದಾಳಿ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆರು ಮಹಿಳೆಯರು ಸಾರ್ವಜನಿಕವಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಪತ್ತೆಯಾಯಿತು. ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆಗಳ ಕುರಿತು ವಿಚಾರಿಸಿದಾಗ, ಅವರು ಸಮರ್ಪಕ ಮಾಹಿತಿಯನ್ನು ನೀಡಲು ವಿಫಲರಾದರೆಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರನ್ನು ಕೋರಮಂಗಲ ಪೊಲೀಸ್ ಠಾಣೆಗೆ ಹಾಜರುಪಡಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
