ರಾಜ್ಯದಲ್ಲಿ ಪ್ರೀತಿ-ಪ್ರೇಮಗಳ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರಗಳು ದಿನೇದಿನೇ ಆತಂಕ ಹುಟ್ಟಿಸುತ್ತಿವೆ. ನಂಬಿಕೆ ಕುಸಿದಾಗ ಸಂಬಂಧಗಳು ಹೇಗೆ ಕ್ರೌರ್ಯಕ್ಕೆ ತಿರುಗುತ್ತವೆ ಎಂಬುದಕ್ಕೆ ಬೆಚ್ಚಿಬೀಳಿಸುವ ಉದಾಹರಣೆ ಬೆಂಗಳೂರಿನ ಬ್ಯಾಡರಹಳ್ಳಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

‘ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತೀನಿ’ ಎಂದು ನಂಬಿಸಿ ಪ್ರಿಯಕರನನ್ನು ಕೊಲೆ ಮಾಡಿರುವ ಆರೋಪ ಯುವತಿಯ ಮೇಲೆ ಕೇಳಿಬಂದಿದೆ. ಮೃತ ಕಿರಣ್ ಹಾಗೂ ಆರೋಪಿತ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಪರಸ್ಪರ ಪ್ರೀತಿಸುತ್ತಿದ್ದರು.

ಮಂಗಳವಾರ ಯುವತಿಯ ಮನೆದಲ್ಲಿ ತಾಯಿ ಮತ್ತು ಅಣ್ಣ ಇಲ್ಲದಿರುವುದನ್ನು ಗಮನಿಸಿದ ಕಿರಣ್, ಆಕೆಯ ಮನೆಗೆ ಭೇಟಿ ನೀಡಿದ್ದನು. ಈ ವೇಳೆ ಯುವತಿ ಕುತಂತ್ರ ರೂಪಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. “ನಿನಗೆ ವಿಭಿನ್ನವಾಗಿ ಪ್ರಪೋಸ್ ಮಾಡ್ತೀನಿ” ಎಂದು ಹೇಳಿ, ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್ ಅನುಮಾನ ವ್ಯಕ್ತಪಡಿಸಿದಾಗ, “ಇದು ಫಾರಿನ್ ಸ್ಟೈಲ್” ಎಂದು ನಂಬಿಸಿ ಅವನನ್ನು ಸಂಪೂರ್ಣ ಅಸಹಾಯಕನನ್ನಾಗಿ ಮಾಡಿದ್ದಾಳೆ.

ನಂತರ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ, ಕಿರಣ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಕ್ರೂರ ಘಟನೆಯನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ ಎಂಬ ಅಚ್ಚರಿಯ ಸಂಗತಿಯೂ ಬಹಿರಂಗವಾಗಿದೆ.

ಪ್ರಾರಂಭದಲ್ಲಿ ಪೊಲೀಸರ ಮುಂದೆ ಯುವತಿ ಸುಳ್ಳು ಕಥೆ ಹೇಳಿದ್ದು ಗಮನಾರ್ಹ. “ನಾನು ಟಾಯ್ಲೆಟ್‌ನಲ್ಲಿದ್ದೆ. ಸೌಂಡ್ ಕೇಳಿ ಹೊರಗೆ ಬಂದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ” ಎಂದು ಹೇಳಿದ್ದಳು. ಆದರೆ ಕಿರಣ್ ಪೆಟ್ರೋಲ್ ತರಲೇ ಇಲ್ಲ ಎಂಬುದು ಸಿಸಿಟಿವಿ ದೃಶ್ಯಗಳಿಂದ ದೃಢಪಟ್ಟಿದ್ದು, ಪೆಟ್ರೋಲ್ ಅನ್ನು ಯುವತಿಯೇ ಮುಂಚಿತವಾಗಿ ತಂದಿಟ್ಟಿದ್ದಾಳೆ ಎಂಬ ಶಂಕೆ ಗಟ್ಟಿಯಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಇಷ್ಟೊಂದು ಭೀಕರ ಕೃತ್ಯಕ್ಕೆ ಕಾರಣವೇನು? ವಿಡಿಯೋ ಚಿತ್ರೀಕರಣದ ಹಿಂದಿನ ಉದ್ದೇಶವೇನು? ಎಂಬುದನ್ನು ತಿಳಿಯಲು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಪ್ರೀತಿ ಎಂಬ ನಾಜೂಕಿನ ಸಂಬಂಧವು ಹೇಗೆ ಅಪಾಯಕಾರಿ ತಿರುವು ಪಡೆಯಬಹುದು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.

Related News

error: Content is protected !!