ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆ ಮೀರಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದ ಯುವತಿಯನ್ನು ಕುಟುಂಬದ ಮರ್ಯಾದೆ ಕಳೆದುಕೊಂಡಳೆಂಬ ಕಾರಣಕ್ಕೆ ಸ್ವಂತ ಮನೆಯವರೇ ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಪ್ರಕರಣ ತಡವಾಗಿ ಬಹಿರಂಗವಾಗಿದೆ.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಹತ್ಯೆಗೀಡಾದ ಯುವತಿ. ಸತ್ಯವ್ವಳಿಗೆ ಈ ಹಿಂದೆ ಮದುವೆಯಾಗಿದ್ದರೂ, ನಂತರ ಪತಿಯನ್ನು ಬಿಟ್ಟು ಕೃಷ್ಣಾ ಪಾಟೀಲ (28) ಎಂಬಾತನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಈ ಸಂಬಂಧ ಈಗಾಗಲೇ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.
ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಮಾರ್ಚ್ 13ರಂದು ಆಕೆಯನ್ನು ಕೊಲೆ ಮಾಡಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬರಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕಾಶ ಹಳವರ (ಚಿಕ್ಕಪ್ಪ), ಶಾನೂರ ಹಳವರ (ಸಹೋದರ) ಮತ್ತು ಮೊರಬದ ಕಲ್ಲಪ್ಪ (ಸಹೋದರಿಯ ಪತಿ) ಬಂಧಿತರಾಗಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಈ ಕೃತ್ಯ ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
