ವಿಜಯನಗರ: ಉತ್ತಮ ಜೀವನದ ಕನಸೊಂದಿಗೆ ವಿದೇಶಕ್ಕೆ ತೆರಳಿದ್ದ ವಿಜಯನಗರ ಜಿಲ್ಲೆಯ ಯುವತಿಯೊಬ್ಬರು ಉಗಾಂಡಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಟುಂಬದವರಲ್ಲಿ ಹಾಗೂ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಬಿಂದು (24) ಹಾಗೂ ಅವರ ಪತಿ ಚಂದ್ರಶೇಖರ್ ದಂಪತಿ ಆಫ್ರಿಕಾದ ಉಗಾಂಡಾದಲ್ಲಿ ವಾಸವಾಗಿದ್ದರು. ಆದರೆ ಅನಿರೀಕ್ಷಿತವಾಗಿ ಬಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬದವರು ದುಃಖಕ್ಕೆ ಒಳಗಾಗಿದ್ದಾರೆ.
ಇದೇ ವೇಳೆ, ಬಿಂದು ಅವರ ಪಾರ್ಥಿವ ಶರೀರವನ್ನು ಉಗಾಂಡಾದಿಂದ ಭಾರತಕ್ಕೆ ತರಲು ಕುಟುಂಬದವರು ಸಂಕಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಸಿರಿಗೆರೆಯ ತರಳಬಾಳು ಶ್ರೀಗಳು ನೆರವಿಗೆ ಬಂದಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
