ಬೆಂಗಳೂರು: ನಗರದಲ್ಲಿ ಪ್ರೇಮ ಸಂಬಂಧ ದಾರುಣ ಅಂತ್ಯ ಕಂಡ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದುವೆಗೆ ನಿರಾಕರಿಸಿದ ಯುವತಿಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
23 ವರ್ಷದ ಅಂಜಲಿ ಮೃತ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿಯಾಗಿದ್ದಾನೆ. ಇಬ್ಬರೂ ಕಳೆದ ಮೂರುರಿಂದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಯವಾಗಿ ಆರಂಭವಾದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು.
ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇರುವ ಕಾರಣ ಅಂಜಲಿ ಕುಟುಂಬಸ್ಥರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕುಟುಂಬವನ್ನು ಒಪ್ಪಿಸಲು ರಾಜೀವ್ ಹಲವು ಬಾರಿ ಪ್ರಯತ್ನಿಸಿದರೂ ಅದು ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು ಎಂದು ತಿಳಿದುಬಂದಿದೆ.
ಭಾನುವಾರ ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಭೇಟಿಗೆ ಕರೆಸಿಕೊಂಡಿದ್ದ ರಾಜೀವ್, ಮದುವೆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ಸಮಯದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.
