ಕಲಬುರಗಿಯಲ್ಲಿ ಮನಕಲಕುವ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿಯನ್ನೇ ನಡುರಸ್ತೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ಜನರನ್ನು ಶಾಕ್‌ಗೆ ಗುರಿಮಾಡಿದೆ.
ಅಫಜಲಪುರ ತಾಲೂಕಿನ ಬಳುರಗಿ ಗ್ರಾಮದ ಬಳಿ ಮಾರ್ಚ್ 26ರಂದು ಮಧ್ಯಾಹ್ನ ಸುಮಾರಿಗೆ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಬಾರಾಮತಿ ಮೂಲದ ಶೈಲಾ (28) ಎಂಬ ಮಹಿಳೆ, ತನ್ನ ಪತಿ ಅಕ್ಷಯ್ ಜಾಧವ್ ಜೊತೆ ಗಾಣಗಾಪುರಕ್ಕೆ ದರ್ಶನಕ್ಕೆ ಬರುತ್ತಿದ್ದ ವೇಳೆ ಈ ದಾರುಣ ಘಟನೆ ನಡೆದಿದೆ.
ಮಧ್ಯದಲ್ಲಿ ಕಾರು ನಿಲ್ಲಿಸಿದ ಅಕ್ಷಯ್, ಪತ್ನಿಯ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿ, ತನ್ನ ಬಳಿಯಿದ್ದ ಆಯುಧದಿಂದ ಕತ್ತನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಮಹಿಳೆ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಜನರ ಮುಂದೆ ಪ್ರಾಣ ಬಿಟ್ಟಿದ್ದಾಳೆ.
ಇಷ್ಟಕ್ಕೂ ತೃಪ್ತಿಗೊಳ್ಳದ ಪತಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೇಲೆ ಕಾರು ಹತ್ತಿಸಿ ಮತ್ತಷ್ಟು ಕ್ರೌರ್ಯ ಮೆರೆದಿದ್ದಾನೆ. ಈ ಘಟನೆ ಹಲವು ಜನರ ಸಮ್ಮುಖದಲ್ಲೇ ನಡೆದಿದ್ದರೂ, ಯಾರೊಬ್ಬರೂ ಮಧ್ಯ ಪ್ರವೇಶ ಮಾಡದೇ ಕೇವಲ ನೋಡುತ್ತಾ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವುದು ಸಮಾಜದ ನಿರ್ಲಕ್ಷ್ಯವನ್ನು ತೋರಿಸಿದೆ.
ಘಟನೆಯ ವೇಳೆ ಕಾರಿನಲ್ಲಿ ಆರೋಪಿಯ ತಂದೆ-ತಾಯಿ ಸೇರಿದಂತೆ ಸಂಬಂಧಿಕರು ಇದ್ದರೂ, ಅವರು ಕೂಡ ಮೌನವಾಗಿರುವ ಮೂಲಕ ಈ ದಾರುಣ ಕೃತ್ಯಕ್ಕೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಅಕ್ಷಯ್ ಜಾಧವ್‌ನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಕೊಲೆಯ ನಿಖರ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹಾಡುಹಗಲೇ ನಡೆದ ಈ ಭೀಕರ ಘಟನೆ ಕಲಬುರಗಿ ಜನತೆಯನ್ನು ಬೆಚ್ಚಿಬೀಳಿಸಿದ್ದು, ಸಮಯಕ್ಕೆ ಸರಿಯಾಗಿ ಯಾರಾದರೂ ತಡೆದಿದ್ದರೆ ಮಹಿಳೆಯ ಜೀವ ಉಳಿಯಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
