ರಾಜಧಾನಿ ಬೆಂಗಳೂರಿನ ಪೀಣ್ಯಾ ಎಚ್‌ಎಂಟಿ ಲೇಔಟ್‌ನಲ್ಲಿ ಅಪ್ರಾಪ್ತ ಬಾಲಕನಿಂದ ನಡೆದ ಡಬಲ್ ಮರ್ಡರ್ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ. ಅಕ್ರಮ ಸಂಬಂಧದ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯೇ ಈ ದುರ್ಘಟನೆಗೆ ಕಾರಣವಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಲ್ಲೇಗೌಡ ಎಂಬಾತನೊಂದಿಗೆ ಛಾಯಾ ಎಂಬ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಪ್ರಶ್ನಿಸಲು ಮಲ್ಲೇಗೌಡನ ಪತ್ನಿ ನಯನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಛಾಯಾ ಮನೆಗೆ ತೆರಳಿದ್ದರು.

ಈ ವೇಳೆ ಮನೆಯಲ್ಲಿ ಛಾಯಾ ಮಗನೊಂದಿಗೆ ನಯನಾ ಮತ್ತು ಸುದೀಪ್ ನಡುವೆ ವಾಗ್ವಾದ ಉಂಟಾಗಿದೆ. ಗಲಾಟೆ ತೀವ್ರಗೊಂಡಾಗ, ತಾಯಿಯನ್ನು ನಿಂದಿಸಿದ್ದಕ್ಕೆ ಆಕ್ರೋಶಗೊಂಡ ಅಪ್ರಾಪ್ತ ಬಾಲಕ ಮಚ್ಚಿನಿಂದ ಹಲ್ಲೆ ನಡೆಸಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ನಾಗೇಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಅಪ್ರಾಪ್ತ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಆತಂಕಕಾರಿ ಉದಾಹರಣೆಯಾಗಿದೆ. ಪುಸ್ತಕ ಹಿಡಿಯಬೇಕಾದ ವಯಸ್ಸಿನಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಸಮಾಜದ ದಿಕ್ಕಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

Related News

error: Content is protected !!