ಮುಗ್ಧ ಜನರ ಧಾರ್ಮಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಮತ್ತೊಂದು ಭೀಕರ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬೆಳಕಿಗೆ ಬಂದಿದೆ. ಸ್ವಯಂ ಘೋಷಿತ ‘ದೇವಮಾನವ’ನೊಬ್ಬ ಭಕ್ತೆಯ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಆಕೆಯ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ.

ಪಾಲ್ಘರ್ ಜಿಲ್ಲೆಯ ವಸಾಯಿ ಪ್ರದೇಶದಲ್ಲಿ “ಅಮ್ಚಿ ವಸಾಯಿ” ಎಂಬ ಸಂಘಟನೆಯನ್ನು ನಡೆಸುತ್ತಿದ್ದ ಋಷಿಕೇಶ್ ವೈದ್ಯ, ಪುಣೆ ಮೂಲದ ಮಹಿಳೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡಿದ್ದನು. ಆಕೆಯ ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಡಿಸೆಂಬರ್ 2023ರಲ್ಲಿ ತನ್ನ ಆಶ್ರಮಕ್ಕೆ ಕರೆಸಿಕೊಂಡಿದ್ದಾನೆ.

ಆಶ್ರಮಕ್ಕೆ ಬಂದ ಮಹಿಳೆಗೆ “ನಾನು ಶಿವನ ಅವತಾರ, ನೀನು ಪಾರ್ವತಿ” ಎಂದು ನಂಬಿಕೆ ಮೂಡಿಸಿ, ಆಕೆಗೆ ಮಾದಕ ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಅಲ್ಲದೆ, ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದು ಬೆದರಿಕೆ ಹಾಕಿ, ಮೂರು ವರ್ಷಗಳ ಕಾಲ ಸತತವಾಗಿ ದೌರ್ಜನ್ಯ ಮುಂದುವರೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊದಲು ದೂರು ನೀಡಲು ಹೆದರಿದ್ದ ಮಹಿಳೆ, ಇತ್ತೀಚೆಗೆ ನಾಸಿಕ್‌ನಲ್ಲಿ ನಡೆದ ಸಮಾನ ಪ್ರಕರಣದ ಹಿನ್ನೆಲೆ ಧೈರ್ಯ ಪಡೆದು, ತನ್ನ ಪತಿಯ ಬಳಿ ವಿಷಯ ಹಂಚಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ವಸಾಯಿ ಮಾಣಿಕ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊದಲ ಘಟನೆ ಪುಣೆಯಲ್ಲಿ ನಡೆದ ಹಿನ್ನೆಲೆ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಇನ್ನೊಂದೆಡೆ, ಆರೋಪಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ಇದು ತನ್ನ ವಿರುದ್ಧದ ಸಂಚು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಹಾಗೂ ಪೀಡಿತೆಯ ಹೇಳಿಕೆಯ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸಿದ್ದಾರೆ.

Related News

error: Content is protected !!