ಗುವಾಹಟಿ: ಸ್ವಂತ ಪತ್ನಿಯನ್ನು ಶಿರಚ್ಛೇದನ ಮಾಡಿ, ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಭೀಕರ ಪ್ರಕರಣದ ಆರೋಪಿ ರಾಮಾನುಜ್ ಗೋಸ್ವಾಮಿ ಪೊಲೀಸರ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ.

ಸೋಮವಾರ ಬೆಳಗಿನ ಜಾವ ಗುವಾಹಟಿಯ ನರಕಾಸುರ ಬೆಟ್ಟದ ಬಳಿ ಘಟನೆ ನಡೆದಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಪೊಲೀಸರು ಆರೋಪಿಯನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆತ ಏಕಾಏಕಿ ವಾಹನದಿಂದ ಜಿಗಿದಿದ್ದಾನೆ. ಕೆಳಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 3ರಂದು ಪತ್ನಿ ರಿಯಾ ತಾಲೂಕ್‌ದಾರ್ ಅವರನ್ನು ಕೊಲೆ ಮಾಡಿದ್ದ ರಾಮಾನುಜ್, ಸೆಪ್ಟೆಂಬರ್ 6ರಂದು ಪೊಲೀಸರಿಗೆ ಶರಣಾಗಿದ್ದ. ಬಳಿಕ ಆತನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿ ನೀಡಲಾಗಿತ್ತು. ಕಸ್ಟಡಿ ಅವಧಿ ಭಾನುವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಆತನನ್ನು ಕರೆದೊಯ್ಯುತ್ತಿದ್ದರು.

ಇದಕ್ಕೂ ಮುನ್ನ ಸೆಪ್ಟೆಂಬರ್ 8ರಂದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಮಾನುಜ್, ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದ. ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ಬಳಿಕ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದ ಎಂದು ವರದಿಯಾಗಿದೆ.

ಕ್ಯಾಬ್ ಚಾಲಕನಾಗಿದ್ದ ರಾಮಾನುಜ್, ಕಳೆದ ವರ್ಷ ಸೆಪ್ಟೆಂಬರ್ 22ರಂದು ರಿಯಾ ತಾಲೂಕ್‌ದಾರ್ ಅವರನ್ನು ವಿವಾಹವಾಗಿದ್ದ. ದಂಪತಿ ಗುವಾಹಟಿಯ ಬೆಲ್ಟೋಲಾ ಪ್ರದೇಶದ ಬಸಿಸ್ಥಾಪುರದಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು.

ಸೆಪ್ಟೆಂಬರ್ 3ರಂದು ಪತ್ನಿಯ ವಿವಾಹೇತರ ಸಂಬಂಧದ ವಿಚಾರವಾಗಿ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಇದೇ ವೇಳೆ ಕೋಪಗೊಂಡ ರಾಮಾನುಜ್ ಪತ್ನಿಯನ್ನು ಕೊಲೆ ಮಾಡಿ, ಆಕೆಯ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದ. ಬಳಿಕ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರು ಆತನ ಫ್ಲ್ಯಾಟ್‌ನಿಂದ ರಿಯಾ ಅವರ ಮೃತದೇಹ ಹಾಗೂ ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ವೇಳೆ ರಾಮಾನುಜ್ ತೀವ್ರ ಮಾದಕ ದ್ರವ್ಯ ವ್ಯಸನಿಯಾಗಿದ್ದ ವಿಚಾರವೂ ಬೆಳಕಿಗೆ ಬಂದಿತ್ತು. ಗುವಾಹಟಿ ಹೊರವಲಯದಲ್ಲಿರುವ ಪುನರ್ವಸತಿ ಕೇಂದ್ರವೊಂದರಲ್ಲಿ ಈ ಹಿಂದೆ ಹಲವು ಬಾರಿ ಆತನಿಗೆ ಚಿಕಿತ್ಸೆ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ಪತ್ನಿಯ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ರಾಮಾನುಜ್, ನ್ಯಾಯಾಲಯಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಪೊಲೀಸರ ವಾಹನದಿಂದ ಜಿಗಿದು ಮೃತಪಟ್ಟಿರುವುದು ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.

Related News

error: Content is protected !!