
ಕಾನ್ಪುರ: ಮನೆಯಲ್ಲಿ ಹೆಜ್ಜೆ ಹೆಜ್ಜೆಗೂ ನಿಗಾ, ಪಾರ್ಟಿ ಮಾಡಲು ನಿರ್ಬಂಧ, ಖರ್ಚು ಮಾಡಲು ಹಣದ ಮೇಲೂ ನಿಯಂತ್ರಣ… ಉದ್ಯಮಿ ಮಾವನ ಕಠಿಣ ನಿಯಮಗಳಿಂದ ಬೇಸತ್ತ ಸೊಸೆಯೊಬ್ಬಳು ಕೊಲೆಗೆ ಸುಪಾರಿ ನೀಡಿದ ಆರೋಪ ಕೇಳಿಬಂದಿದೆ. ಕೊನೆಗೆ ಉದ್ಯಮಿ ಮಾವನನ್ನು 26 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೊಸೆಯನ್ನೇ ಪ್ರಮುಖ ಆರೋಪಿಯಾಗಿ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಉದ್ಯಮಿ ವಿನೀತ್ ಮಿನೋಚಾ ಅವರು ಕಾನ್ಪುರದ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ದುಷ್ಕರ್ಮಿಗಳು ಅವರ ಕತ್ತು ಸೀಳಿ, ದೇಹದ ವಿವಿಧ ಭಾಗಗಳಿಗೆ 26 ಬಾರಿ ಇರಿದು ಹತ್ಯೆ ಮಾಡಿದ್ದರು. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಕಳವಾಗಿರಲಿಲ್ಲ. ಹೀಗಾಗಿ ಇದು ದರೋಡೆಗಾಗಿ ನಡೆದ ಕೊಲೆಯಲ್ಲ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು.
ಈ ಸುಳಿವಿನ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು, ಕೊಲೆ ನಡೆದ ನಾಲ್ಕೈದು ದಿನಗಳಲ್ಲೇ ಪ್ರಕರಣವನ್ನು ಭೇದಿಸಿದ್ದಾರೆ. ಉದ್ಯಮಿಯ ಸೊಸೆ ಶಾಲು ಮಿನೋಚಾ, ಅವರ ಮಾವನ ಬಳಿ ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವಿಶಾಲ್ ಹಾಗೂ 30 ವರ್ಷದ ನಿರುದ್ಯೋಗಿ ಪರಿಚಯಸ್ಥ ರಾಜ್ ಕಿಶೋರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಶಾಲು ನೀಡಿರುವ ಹೇಳಿಕೆಯ ಪ್ರಕಾರ, ವಿನೀತ್ ಅವರು ತಮ್ಮ ಮಗ ಮತ್ತು ಸೊಸೆಯ ಖರ್ಚು-ವೆಚ್ಚಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದ್ದಲ್ಲದೆ, ಸಣ್ಣಪುಟ್ಟ ಖರ್ಚಿಗೂ ಅವರ ಅನುಮತಿ ಪಡೆಯಬೇಕಾಗಿತ್ತು. ತಡರಾತ್ರಿ ಮನೆಗೆ ಬರುವುದಕ್ಕೂ ನಿರ್ಬಂಧವಿತ್ತು. ಪಾರ್ಟಿ ಸೇರಿದಂತೆ ಹಲವು ಚಟುವಟಿಕೆಗಳ ಮೇಲೂ ನಿಯಂತ್ರಣ ಹೇರಲಾಗಿತ್ತು ಎನ್ನಲಾಗಿದೆ.
ಇದರ ನಡುವೆ, ವಿನೀತ್ ಸಾವಿಗೂ ಸುಮಾರು 15ರಿಂದ 20 ದಿನಗಳ ಹಿಂದೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಶಾಲು ಆಕ್ಷೇಪ ವ್ಯಕ್ತಪಡಿಸಿದ್ದರೂ, ವಿನೀತ್ ಅದನ್ನು ಲೆಕ್ಕಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವೂ ಆಕೆಯ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ ಮಾವನ ಕಠಿಣ ನಿಯಮಗಳು ಹಾಗೂ ನಿರಂತರ ನಿಗೆಯಿಂದ ಬೇಸತ್ತ ಶಾಲು, ಮಾಜಿ ಉದ್ಯೋಗಿ ವಿಶಾಲ್ ಮತ್ತು ರಾಜ್ ಕಿಶೋರ್ ನೆರವಿನೊಂದಿಗೆ ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಮೂವರನ್ನೂ ಬಂಧಿಸಿರುವ ಪೊಲೀಸರು, ಕೊಲೆಯ ಹಿಂದಿನ ಸಂಪೂರ್ಣ ಸಂಚು ಹಾಗೂ ಹಣದ ವಹಿವಾಟಿನ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






